Friday, 13th December 2024

15 ಏಮ್ಸ್ ಆಸ್ಪತ್ರೆಗಳ ಸ್ಥಾಪನೆಯಿಂದ ಜನಸಾಮಾನ್ಯರಿಗೆ ಅನುಕೂಲ: ಪ್ರಧಾನಿ ನರೇಂದ್ರ ಮೋದಿ

ನವ ದೆಹಲಿ : ದೇಶದಲ್ಲಿ ಏಳು ವರ್ಷಗಳಲ್ಲಿ 15 ಏಮ್ಸ್ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ. ಈ ಮೂಲಕ ದೇಶದ ಹಲವಡೆಗಳಲ್ಲಿ ಜನರಿಗೆ ಅನುಕೂಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.

ವೈದ್ಯರ ದಿನದ ಅಂಗವಾಗಿ ದೇಶದ ವೈದ್ಯ ಸಮೂಹವನ್ನು ಉದ್ದೇಶಿಸಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಮೋದಿ, ವೈದ್ಯರ ಶ್ರಮದಿಂದ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ದೇಶದ ಲಕ್ಷಾಂತರ ಮಂದಿಯ ಜೀವ ರಕ್ಷಣೆಯಾಗಿದೆ. ಕೋವಿಡ್ ವೈರಸ್ ವಿಶ‍್ವದಾದ್ಯಂತ ಹರಡಿದಾಗಿನಿಂದ ನಿರಂತರವಾಗಿ ವೈದ್ಯರು ಜನರ ಸೇವೆ ಮಾಡುತ್ತಿದ್ದಾರೆ. ದೇವರಂತೆ ವೈದ್ಯ ಸಮೂಹದವರು ಕೆಲಸ ಮಾಡಿದ್ದಾರೆ ಎಂದು ವೈದ್ಯರನ್ನು ನಮೋ ಶ್ಲಾಘಿಸಿದ್ದಾರೆ.

ದೇಶದಾದ್ಯಂತ ಆರೋಗ್ಯ ಕ್ಷೇತ್ರವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, 50 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡ ಲಾಗಿದೆ. ಆರೋಗ್ಯ ಕ್ಷೇತ್ರ ಬಲಪಡಿಸುವತ್ತ ನಮ್ಮ ಮೊದಲ ಆದ್ಯತೆ ಇರಲಿದೆ ಎಂದು ಹೇಳಿದ್ದಾರೆ. ವೈದ್ಯರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗುತ್ತದೆ. ವೈದ್ಯರಿಗೆ ವಿಮಾ ಸೌಲಭ್ಯವನ್ನು ಕೂಡ ನಿಡಲಾಗುತ್ತದೆ ಎಂದು ಹೇಳಿದ್ದಾರೆ.

ಯಾವ ಭಯ ಭೀತಿಯಿಲ್ಲದೇ ಜನರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ವೈದ್ಯರನ್ನು ಭಾರತೀಯರೆಲ್ಲರೂ ದೇವರೆಂದು ಪರಿಗಣಿಸಿದ್ದಾರೆ. ಕೋವಿಡ್ ಸೇವೆಯಲ್ಲಿ ನಿರತರಾಗಿದ್ದ ನೂರಾರು ಮಂದಿ ವೈದ್ಯರನ್ನು ದೇಶ ಕಳೆದುಕೊಂಡಿದೆ. ಅವರೆಲ್ಲರ ಸೇವೆಗೆ ಭಾರತ ಕೃತಜ್ಙರಾಗಿರುತ್ತದೆ.