Wednesday, 11th December 2024

ಮೂರು ಸಾವಿರ ಕಿರಿಯ ವೈದ್ಯರ ರಾಜೀನಾಮೆ

ಭೋಪಾಲ್ : ಮಧ್ಯಪ್ರದೇಶದ ಆರು ಸರ್ಕಾರಿ ಮೆಡಿಕಲ್​ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೂರು ಸಾವಿರ  ಕಿರಿಯ ವೈದ್ಯರು ಸಾಮೂಹಿಕವಾಗಿ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ ಎಂದು ಮಧ್ಯಪ್ರದೇಶ್​ ಜೂನಿಯರ್ ಡಾಕ್ಟರ್ಸ್​ ಅಸೋಸಿಯೇಷನ್(ಎಂಪಿಜೆಡಿಎ) ಅಧ್ಯಕ್ಷ ಡಾ. ಅರವಿಂದ್ ಮೀನ ತಿಳಿಸಿದ್ದಾರೆ.

ನಾಲ್ಕು ದಿನಗಳಿಂದ ನಡೆಯುತ್ತಿರುವ ಕಿರಿಯ ವೈದ್ಯರ ರಾಜ್ಯವ್ಯಾಪಿ ಸ್ಟ್ರೈಕ್​ಅನ್ನು ಹೈಕೋರ್ಟ್​ ಕಾನೂನುಬಾಹಿರ ಎಂದು ಘೋಷಿಸಿದ ಬೆನ್ನಲ್ಲೇ ಈ ಕ್ರಮಕ್ಕೆ ವೈದ್ಯರು ಮುಂದಾಗಿದ್ದಾರೆ. ಸ್ಟೈಪೆಂಡ್​ನಲ್ಲಿ ಶೇ. 24 ರಷ್ಟು ಏರಿಕೆ ಮತ್ತು ತಮ್ಮ ಕುಟುಂಬ ದವರಿಗೆ ಕರೋನಾ ಸೋಂಕು ತಗುಲಿದರೆ ಉಚಿತ ಚಿಕಿತ್ಸೆ ಸೌಲಭ್ಯ ಸೇರಿದಂತೆ ಹಲವು ಬೇಡಿಕೆಗಳನ್ನು ಕಿರಿಯ ವೈದ್ಯರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಮೇ 6 ರಂದು ಸರ್ಕಾರ ಅವರ ಬೇಡಿಕೆಗಳನ್ನು ಈಡೇರಿಸುವುದಾಗಿ ಹೇಳಿದ್ದರೂ ಈವರೆಗೆ ಏನೂ ಕ್ರಮ ತೆಗೆದುಕೊಳ್ಳದ್ದರಿಂದ ಸ್ಟ್ರೈಕ್​ ಕರೆಯಲಾಗಿದೆ ಎಂದು ಡಾ. ಮೀನ ಹೇಳಿದ್ದಾರೆ.

ಕರೊನಾ ಸಮಯದಲ್ಲಿ ಈ ತೆರನ ಸ್ಟ್ರೈಕ್​ ಕಾನೂನುಬಾಹಿರವೆಂದು ಘೋಷಿಸಿರುವ ಮಧ್ಯಪ್ರದೇಶ ಹೈಕೋರ್ಟ್,​ ಪ್ರತಿಭಟನಾನಿರತ ಕಿರಿಯ ವೈದ್ಯರಿಗೆ 24 ಗಂಟೆಗಳೊಳಗೆ ಅಂದರೆ ಇಂದು ಮಧ್ಯಾಹ್ನ 2.30 ರೊಳಗೆ ಕೆಲಸಕ್ಕೆ ಮರಳಬೇಕೆಂದು ನಿರ್ದೇಶಿಸಿದೆ.

ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್​​ ಸಾರಂಗ್​ ಅವರು ಬಿಕ್ಕಟ್ಟನ್ನು ಬಗೆಹರಿಸಲು ಹಲವು ಜೆಡಿಎ ಪ್ರತಿನಿಧಿ ಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಕಿರಿಯ ವೈದ್ಯರ ಸ್ಟೈಪೆಂಡ್​ನಲ್ಲಿ ಶೇ. 17 ರಷ್ಟು ಏರಿಕೆ ಅನುಮೋದಿಸಿದ್ದು, ಶೀಘ್ರದಲ್ಲೇ ಈ ಕುರಿತು ಆದೇಶ ಹೊರಬೀಳಲಿದೆ ಎಂದು ವೈದ್ಯಕೀಯ ಶಿಕ್ಷಣ ಆಯುಕ್ತ ನಿಶಾಂತ್ ವಾರ್ವಡೆ ಭೋಪಾಲ್​ನಲ್ಲಿ ತಿಳಿಸಿದ್ದಾರೆ.