Friday, 13th December 2024

Operation Bhediya: ಮಕ್ಕಳನ್ನು ಹೊತ್ತೊಯ್ಯುವ ನರಭಕ್ಷಕ ತೋಳಗಳ ಸೆರೆಗೆ ʼಆಪರೇಷನ್‌ ಭೇಡಿಯಾʼ

Operation Bhediya

ಲಕ್ನೋ: ಉತ್ತರ ಪ್ರದೇಶ (Uttar Pradesh)ದ ಬಹ್ರೈಚ್ (Bahraich) ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಕನಿಷ್ಠ 8 ಮಂದಿಯನ್ನು ಕೊಂದು, 15 ಮಂದಿಯನ್ನು ಗಾಯಗೊಳಿಸಿದ್ದ ತೋಳಗಳನ್ನು (Wolves) ಕೊನೆಗೂ ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ಗುರುವಾರ (ಆಗಸ್ಟ್‌ 29) ತಿಳಿಸಿದ್ದಾರೆ. ʼಆಪರೇಷನ್‌ ಭೇಡಿಯಾʼ (Operation Bhediya) ಮೂಲಕ ಸುಮಾರು 4 ತೋಳಗಳನ್ನು ಸೆರೆ ಹಿಡಿಯಲಾಗಿದೆ. ಅದಾಗ್ಯೂ ಈ ಹಿಂಡಿನಲ್ಲಿದ್ದ ಇನ್ನೂ ಎರಡು ತೋಳಗಳು ಸೆರೆ ಸಿಕ್ಕಿಲ್ಲ. ಈ ಬೃಹತ್‌ ಗಾತ್ರದ ತೋಳಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸುವುದಾಗಿ ಮೂಲಗಳು ತಿಳಿಸಿವೆ.

ʼʼಹಲವು ದಿನಗಳಿಂದ ಇಲ್ಲಿ ಭಯಾನಕ ತೋಳಗಳ ಹಾವಳಿ ಮಿತಿ ಮೀರಿದೆ. ಇವತ್ತು ಒಂದು ತೋಳವನ್ನು ಸೆರೆ ಹಿಡಿದ್ದಿದ್ದೇವೆ. ಈ ಮೂಲಕ ಒಟ್ಟು 4 ತೋಳಗಳು ಸೆರೆ ಸಿಕ್ಕಂತಾಗಿದೆ. ಈ ತೋಳಗಳನ್ನು ಮೃಗಾಲಯಗಳಿಗೆ ಸ್ಥಳಾಂತರಿಸಲಾಗುವುದು. ಸದ್ಯ ಇನ್ನೂ 2 ತೋಳಗಳು ಓಡಾಡುತ್ತಿದ್ದು, ಅವುಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳುತ್ತಿದ್ದೇವೆʼʼ ಎಂದು ಮುಖ್ಯ ಅರಣ್ಯಾಧಿಕಾರಿ ರೇಣು ಸಿಂಗ್‌ ತಿಳಿಸಿದ್ದಾರೆ. ಸೆರೆ ಹಿಡಿದ ತೋಳದ ವಿಡಿಯೊವನ್ನು ಅರಣ್ಯಾಧಿಕಾರಿಗಳು ಹಂಚಿಕೊಂಡಿದ್ದಾರೆ.

https://x.com/ANI/status/1829042917547053544

7 ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ ಕಳೆದ 2 ತಿಂಗಳಲ್ಲಿ ಬಹ್ರೈಚ್ ಜಿಲ್ಲೆಯಲ್ಲಿ ಕನಿಷ್ಠ 8 ಮಂದಿ ತೋಳದ ದಾಳಿಗೆ ಬಲಿಯಾಗಿದ್ದಾರೆ. ಮಂಗಳವಾರ (ಆಗಸ್ಟ್‌ 27) ರಾತ್ರಿ ನಡೆದ ಕೊನೆಯ ದಾಳಿಯಲ್ಲಿ ಶಿಶುವೊಂದು ತೋಳಕ್ಕೆ ಬಲಿಯಾಗಿತ್ತು. ಈ ಹಿನ್ನಲೆಯಲ್ಲಿ ತೋಳಗಳನ್ನು ಸೆರೆ ಹಿಡಿಯಲು ಉತ್ತರ ಪ್ರದೇಶ ಸರ್ಕಾರ ʼಆಪರೇಷನ್‌ ಭೇಡಿಯಾʼ ಕಾರ್ಯಾಚರಣೆಯನ್ನು ಆರಂಭಿಸಿದೆ.

‘ಆಪರೇಷನ್‌ ಭೇಡಿಯಾ’

ತೋಳಗಳನ್ನು ಸೆರೆ ಹಿಡಿಯಲು ಅಧಿಕಾರಿಗಳು ಒಟ್ಟು 16 ತಂಡಗಳನ್ನು ನಿಯೋಜಿಸಿದ್ದಾರೆ. ಅರಣ್ಯ ಹಾಗೂ ಹಳ್ಳಿಗಳ ಹೊಲಗಳ ನಡುವೆ ಓಡಾಡುವ ತೋಳಗಳ ಜಾಡು ಹಿಡಿಯಲು ಡ್ರೋನ್ ಕ್ಯಾಮೆರಾಗಳು ಮತ್ತು ಥರ್ಮಲ್ ಡ್ರೋನ್ ಮ್ಯಾಪಿಂಗ್ ತಂತ್ರಜ್ಞಾನಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಳಸುತ್ತಿದ್ದಾರೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಸ್ವತಃ ಈ ಆಪರೇಷನ್‌ನ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಅರಣ್ಯ ಸಚಿವ ಅರುಣ್‌ ಸಕ್ಸೇನಾ ಬುಧವಾರ ಬಾಧಿತ ಜಿಲ್ಲೆಗೆ ಭೇಟಿ ನೀಡಿ ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈ ವೇಳೆ ಅವರು ಆತಂಕ ಮೂಡಿಸಿರುವ ತೋಳಗಳನ್ನು ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದರು. ಮೃತರ ಕುಟುಂಟಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ.

ಮನೆಯಿಂದ ಹೊರಗಡೆ ಮಲಗದಂತೆ, ಮಕ್ಕಳನ್ನು ಹೊರಗೆ ಅಡ್ಡಾಡಲು ಬಿಡದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜತೆಗೆ ಸದಾ ಮನೆಗೆ ಬಾಗಿಲು ಹಾಕಿಕೊಳ್ಳುವಂತೆ ಸೂಚಿಸಿದ್ದಾರೆ. ಏಕಾಂಗಿಯಾಗಿ ಓಡಾಡದಂತೆಯೂ ಸಲಹೆ ನೀಡಲಾಗಿದೆ. ಸದ್ಯ ಹಳ್ಳಿಗಳಲ್ಲಿ ಎಲ್ಲ ಮನೆಗಳಿಗೆ ಬಾಗಿಲು ಅಳವಡಿಸಲಾಗುತ್ತಿದೆ. ರಾತ್ರಿ ಗಸ್ತು ತಿರುಗುವಿಕೆಯನ್ನು ನಡೆಸಲಾಗುತ್ತಿದೆ. ಜತೆಗೆ ತೋಳಗಳ ದಾಳಿ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ತೋಳಗಳ ದಾಳಿಯಿಂದ ಕಂಗೆಟ್ಟ ಜನರೂ ಮಕ್ಕಳ ಜೀವ ಉಳಿಸಲು ಸೂಕ್ತ ಕ್ರಮ ಕೈಗೊಂಡಿದ್ದಾರೆ. ರಾತ್ರಿಯಿಡೀ ಗ್ರಾಮಗಳಲ್ಲಿ ಪಹರೆ ಕಾಯುತ್ತಿದ್ದಾರೆ. ಆನೆಗಳ ಸಗಣಿ ಮತ್ತು ಮೂತ್ರವನ್ನು ಬಳಸಿ ತೋಳಗಳನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ.