Friday, 13th December 2024

ಕಾರು, ಬೈಕ್‌ ಮೇಲೆ ಹರಿದ ಲಾರಿ: ಐವರ ಸಾವು

ಪುಣೆ: ಕಾರಿನ ಮೇಲೆ ಮತ್ತು ಎರಡು ಬೈಕ್ ಮೇಲೆ ಟ್ರಕ್ ಹರಿದ ಪರಿಣಾಮ ಐವರು ಮೃತಪಟ್ಟು, ಐವರು ಗಾಯಗೊಂಡಿದ್ದಾರೆ. ಪುಣೆ-ಅಹ್ಮದ್ ನಗರ್ ರಸ್ತೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ.

ಪುಣೆ ಸಮೀಪ ಶಿಕ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಒಬ್ಬರು ದಂಪತಿ ಬೈಕ್ ನಲ್ಲಿ ತೆರಳುತ್ತಿದ್ದರು.

ಕಾರಿನಲ್ಲಿ ಆರು ಮಂದಿ ಪ್ರಯಾಣಿಕರಿದ್ದರು. ಅವರಲ್ಲಿ ಮೂವರು ಮೃತಪಟ್ಟಿದ್ದು ಇನ್ನು ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಬೈಕ್ ನಲ್ಲಿದ್ದ ಇಬ್ಬರು ಕಾರಿಗೆ ಡಿಕ್ಕಿ ಹೊಡೆದು ಗಾಯಗೊಂಡಿದ್ದಾರೆ. ಟ್ರಕ್ ಬಹಳ ವೇಗವಾಗಿ ಬಂದು ತಪ್ಪು ಹಾದಿಯಲ್ಲಿ ನುಗ್ಗಿ ಡಿವೈಡರ್ ಗೆ ಡಿಕ್ಕಿ ಹೊಡೆದು ಕಾರಿಗೆ ಮತ್ತು ಎರಡು ಬೈಕ್ ಗೆ ಡಿಕ್ಕಿ ಹೊಡೆಯಿತು ಎಂದು ಪೊಲೀಸರು ಅಪಘಾತವಾದ ಬಗ್ಗೆ ವಿವರಿಸಿದ್ದಾರೆ.