Wednesday, 11th December 2024

ಪ.ಬಂಗಾಳದಲ್ಲಿ 2024ರ ವೇಳೆಗೆ 700 ಶಾಖೆಗಳ ಆರಂಭ: ಆರ್‌ಎಸ್‌ಎಸ್

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ.

ಸದ್ಯ ಪಶ್ಚಿಮ ಬಂಗಾಳದಲ್ಲಿ 1,900 ಆರ್‌ಎಸ್‌ಎಸ್ ಶಾಖೆಗಳಿವೆ. 2024ರ ವೇಳೆಗೆ ಇನ್ನೂ 700 ಶಾಖೆಗಳನ್ನು ಆರಂಭಿಸುವುದು ಆರ್‌ಎಸ್‌ಎಸ್ ಗುರಿಯಾಗಿದೆ.

ಆರ್‌ಎಸ್‌ಎಸ್ ಸರಸಂಘ ಚಾಲಕ (ಮುಖ್ಯಸ್ಥ) ಮೋಹನ್ ಭಾಗವತ್ 2 ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಮಂಡಲ ಮಟ್ಟದಲ್ಲಿ ಮತ್ತು ನಗರ ಪ್ರದೇಶಗಳಲ್ಲಿ ವಾರ್ಡ್ ಮಟ್ಟದಲ್ಲಿ ಶಾಖೆಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಆರ್‌ಎಸ್‌ಎಸ್‌ನ ಪಶ್ಚಿಮ ಬಂಗಾಳ ಘಟಕದ ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಹೊಸ ವಲಯ ರಚಿಸಿ, ಮೂರು ವಲಯಗಳಾಗಿ ಕಾರ್ಯಚಟುವಟಿಕೆಯನ್ನು ವಿಸ್ತರಿ ಸುವ ಬಗ್ಗೆ ಕಳೆದ ಮಾರ್ಚ್‌ನಲ್ಲಿ ಆರ್‌ಎಸ್‌ಎಸ್ ನಿರ್ಧಾರ ಕೈಗೊಂಡಿತ್ತು. 2025ಕ್ಕೆ ಆರ್‌ಎಸ್‌ಎಸ್ ಸ್ಥಾಪನೆಯಾಗಿ ನೂರು ವರ್ಷಗಳಾಗಲಿವೆ.

ತೆರೆಯ ಮರೆಯಲ್ಲೇ ಉಳಿದಿರುವ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಸಂಸ್ಥೆಗಳ ಯಶೋಗಾಥೆಯನ್ನು ಜನರಿಗೆ ತಲುಪಿಸುವ ಯೋಜನೆಯನ್ನೂ ಆರ್‌ಎಸ್‌ ಎಸ್ ಹಮ್ಮಿಕೊಂಡಿದೆ.

ಆರ್‌ಎಸ್‌ಎಸ್ ಜತೆ ನಂಟು ಹೊಂದಿರುವ ಸುಮಾರು 40 ಸಂಘಟನೆಗಳ ಪ್ರತಿನಿಧಿಗಳ ಜತೆ ಭಾಗವತ್ ಕೋಲ್ಕತ್ತದಲ್ಲಿರುವ ಪ್ರಾದೇಶಿಕ ಪ್ರಧಾನ ಕಚೇರಿಯಲ್ಲಿ ಮಾತುಕತೆ ನಡೆಸಿದ್ದಾರೆ.

ಬಂಗಾಳದಲ್ಲಿ ಎಲ್ಲವನ್ನೂ ರಾಜಕೀಯ ದೃಷ್ಟಿಕೋನದಿಂದಲೇ ನೋಡಲಾಗುತ್ತಿದೆ. ಆದರೆ, ಸಂಘದ ಕಾರ್ಯವ್ಯಾಪ್ತಿ ವಿಸ್ತರಣೆ ನಮ್ಮದೇ ಯೋಜನೆ. ನಾವು ಚುನಾವಣೆಗಳನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಭಾಗವತ್ ಸ್ಪಷ್ಟಪಡಿಸಿದ್ದಾಗಿ ಮೂಲಗಳು ಹೇಳಿವೆ.