Monday, 14th October 2024

ಕುಸಿದ ಹಿಮಪರ್ವತಕ್ಕೆ ಎಂಟು ಮಂದಿ‌ ಬಲಿ: 160ಕ್ಕೂ ಹೆಚ್ಚು ಸಿಲುಕಿರುವ ಶಂಕೆ

ಉತ್ತರಖಂಡ: ತಪೋವನ ಏರಿಯಾದಲ್ಲಿ ಕುಸಿದ ಹಿಮಪರ್ವತಕ್ಕೆ ಸುಮಾರು ಎಂಟು ಮಂದಿ‌ ಬಲಿಯಾಗಿದ್ದು, 160ಕ್ಕೂ ಹೆಚ್ಚು ಮಂದಿ ಹಿಮಪಾತದಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಉತ್ತರಖಂಡದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಎನ್ಡಿಆರ್‌ಎಫ್, ಐಟಿಬಿಪಿ ಸೇರಿದಂತೆ ಹಲವರು ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಮುಂದುವರೆಸಿದ್ದಾರೆ. ವಿಷ್ಣು ಪ್ರಯಾಗ್, ಜೋಶಿಮಠ, ಕರ್ಣಪ್ರಯಾಗ್ ಸೇರಿದಂತೆ ನದಿಪಾತ್ರದ ಜನತೆಗೆ ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.

ಮೂವರ ಮೃತದೇಹಗಳು ಸಿಕ್ಕಿರುವುದಾಗಿ ರಕ್ಷಣಾ ತಂಡಗಳು ತಿಳಿಸಿವೆ. ಇನ್ನೂ ಮೂರ್ನಾಲ್ಕು ತಂಡಗಳನ್ನು ದೆಹಲಿಯಿಂದ ಡೆಹ್ರಡೂನ್ ಗೆ ಏರ್ ಲಿಫ್ಟ್ ಮಾಡಿ, ನಂತರ ಜೋಶಿಮಠ್ ಗೆ ಕಳುಹಿಸಲಾಗುವುದು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

600 ಸೇನಾ ಸಿಬ್ಬಂದಿಯನ್ನೊಳಗೊಂಡ ಆರು ತುಕಡಿಗಳು ಪ್ರವಾಹ ಭಾದಿತ ಪ್ರದೇಶಕ್ಕೆ ಆಗಮಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕಾರ್ಯಾಚರಣೆಗಾಗಿ ಹೆಲಿಕಾಪ್ಟರ್ ನ್ನು ಕೂಡಾ ನಿಯೋಜಿಸಲಾಗಿದೆ. ಒಂದು ಎಂಜಿನಿಯರಿಂಗ್ ಕಾರ್ಯಪಡೆ ಯನ್ನು ರಿಂಗಿ ಗ್ರಾಮಕ್ಕೆ ಕಳುಹಿಸಲಾಗಿದ್ದು, ಎರಡು ವೈದ್ಯಕೀಯ ತಂಡಗಳು ಕಾರ್ಯಾಚರಣೆಗೆ ಸೇರ್ಪಡೆಗೊಂಡಿವೆ.

ಪ್ರವಾಹ ಉಂಟಾದ ಬಳಿಕ ಇಂಡೋ-ಟಿಬೆಟನ್ ಬಾರ್ಡರ್ ಗಸ್ತು ಸಿಬ್ಬಂದಿ ತಪೋವನ್ ಮತ್ತು ರೆನಿ ಪ್ರದೇಶಕ್ಕೆ ಆಗಮಿಸಿದ್ದು, ಸ್ಥಳೀಯ ಆಡಳಿತದೊಂದಿಗೆ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯ ಚುರುಕಿನಿಂದ ಸಾಗಿದೆ ಎಂದು ರಿಷಿಕೇಶಿ ಬಳಿಯ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ.