Sunday, 13th October 2024

Actor Govinda: ಆಕಸ್ಮಿಕವಾಗಿ ಗುಂಡು ಸಿಡಿದು ಆಸ್ಪತ್ರೆಗೆ ದಾಖಲಾದ ಬಾಲಿವುಡ್‌ ನಟ ಗೋವಿಂದ; ಫ್ಯಾನ್ಸ್‌ಗೆ ನೀಡಿದ ಸಂದೇಶದಲ್ಲಿ ಏನಿದೆ?

Actor Govinda

ಮುಂಬೈ: ಆಕಸ್ಮಿಕವಾಗಿ ಗುಂಡು ತಗುಲಿ ಬಾಲಿವುಡ್‌ನ ಖ್ಯಾತ ನಟ ಗೋವಿಂದ (Actor Govinda) ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಇದೀಗ ಅವರು ಆಸ್ಪತ್ರೆಯಿಂದಲೇ ಆಡಿಯೊ ಸಂದೇಶ ಹಂಚಿಕೊಂಡಿದ್ದು, ತಾವು ಚೇತರಿಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಜತೆಗೆ ಕಾಳಜಿ ತೋರಿದ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಪರವಾನಗಿ ಹೊಂದಿದ ಬಂದೂಕು ಸಿಡಿದು ಗೋವಿಂದ ಅವರ ಮೊಣಕಾಲಿನ ಕೆಳಗೆ ಗಾಯವಾಗಿದ್ದು, ಸದ್ಯ ವೈದ್ಯರು ಗುಂಡು ಹೊರ ತೆಗೆದಿದ್ದಾರೆ.

ಗೋವಿಂದ ಹೇಳಿದ್ದೇನು?

ಅಭಿಮಾನಿಗಳು, ಪೋಷಕರು ಮತ್ತು ಗುರುಗಳ ಆಶೀರ್ವಾದವು ತನ್ನನ್ನು ಉಳಿಸಿದೆ ಎಂದು 60 ವರ್ಷದ ನಟ ಗೋವಿಂದ ಭಾವುಕರಾಗಿ ನುಡಿದಿದ್ದಾರೆ. “ನನಗೆ ಗುಂಡು ತಗುಲಿತ್ತು. ಇದೀಗ ಅದನ್ನು ಹೊರತೆಗೆಯಲಾಗಿದೆ. ಇಲ್ಲಿನ ವೈದ್ಯರಿಗೆ ಮತ್ತು ನಿಮ್ಮ ಪ್ರಾರ್ಥನೆಗೆ ಧನ್ಯವಾದಗಳು” ಎಂದು ಅವರು ಹೇಳಿದ್ದಾರೆ. ಇಂದು (ಅಕ್ಟೋಬರ್‌ 1) ಮುಂಜಾನೆ 4.45ರ ಸುಮಾರಿಗೆ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೋಗಲು ಸಿದ್ಧರಾಗುತ್ತಿದ್ದಾಗ ಘಟನೆ ಸಂಭವಿಸಿದೆ. ಶಿವಸೇನೆ ನಾಯಕರೂ ಆಗಿರುವ ಗೋವಿಂದ ಅವರು ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಒಬ್ಬರೇ ಇದ್ದರು.

ಗೋವಿಂದ ಪರವಾನಗಿ ಹೊಂದಿದ ತಮ್ಮ ರಿವಾಲ್ವರ್ ಅನ್ನು ಕಬೋರ್ಡ್‌ನಲ್ಲಿ ಇಡುತ್ತಿದ್ದಾಗ ಅದು ನೆಲಕ್ಕೆ ಬಿದ್ದು ಸಿಡಿದಿದೆ ಎಂದು ಅವರ ಮ್ಯಾನೇಜರ್‌ ಶಶಿ ಸಿನ್ಹಾ ತಿಳಿಸಿದ್ದಾರೆ. ಗುಂಡು ಅವನ ಮೊಣಕಾಲಿನ ಕೆಳಗೆ ತಗುಲಿತ್ತು. ಕೂಡಲೇ ಗೋವಿಂದ ಅವರು ಕೋಲ್ಕತ್ತಾದಲ್ಲಿದ್ದ ತನ್ನ ಪತ್ನಿ ಸುನೀತಾ ಅಹುಜಾ ಮತ್ತು ಮ್ಯಾನೇಜರ್‌ಗೆ ಕರೆ ಮಾಡಿದ್ದರು. ಅವರಿಂದ ಮಾಹಿತಿ ಪಡೆದ ಪೊಲೀಸರು ತಕ್ಷಣ ಮುಂಬೈಯ ಜುಹುನಲ್ಲಿರುವ ಗೋವಿಂದ ಅವರ ಮನೆಗೆ ಧಾವಿಸಿ ಹತ್ತಿರದ ಕ್ರಿಟಿಕೇರ್ ಆಸ್ಪತ್ರೆಗೆ ಕರೆದೊಯ್ದರು. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೊಂದಿಗೆ ಮಗಳು ಟೀನಾ ಇದ್ದಾರೆ ಎನ್ನಲಾಗಿದೆ.

ದೂರು ದಾಖಲಾಗಿಲ್ಲ

ನಟ ಯಾವುದೇ ದೂರು ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. “ಕೋಲ್ಕತ್ತಾಕ್ಕೆ ತೆರಳಲು ತಯಾರಾಗಿದ್ದೆವು. ಬೆಳಿಗ್ಗೆ 6 ಗಂಟೆಗೆ ಹೊರಡಲಿರುವ ವಿಮಾನದಲ್ಲಿ ತೆರಳಲು ಟಿಕೆಟ್‌ ಬುಕ್‌ ಮಅಡುದ್ದೆವು. ಅದರಂತೆ ನಾನು ನಿಲ್ದಾಣಕ್ಕೆ ತಲುಪಿದ್ದೆ. ಈ ಅವಘಡ ಸಂಭವಿಸಿದಾಗ ಗೋವಿಂದ ಅವರು ತಮ್ಮ ನಿವಾಸದಿಂದ ವಿಮಾನ ನಿಲ್ದಾಣಕ್ಕೆ ಹೊರಡಲು ಸಿದ್ಧರಾಗಿದ್ದರು” ಎಂದು ಮ್ಯಾನೇಜರ್ ಶಶಿ ಸಿನ್ಹಾ ತಿಳಿಸಿದ್ದಾರೆ. ʼʼಅದೃಷ್ಟವಶಾತ್‌ ಗೋವಿಂದ ಅವರ ಕಾಲಿಗೆ ಮಾತ್ರ ಗಾಯವಾಗಿದೆ ಮತ್ತು ಅದು ಗಂಭೀರವಾಗಿಲ್ಲ” ಎಂದೂ ಅವರು ಹೇಳಿದ್ದಾರೆ. ಮಾಹಿತಿ ಪಡೆದ ಗೋವಿಂದ ಅವರ ಪತ್ನಿ ಸುನೀತಾ ಅಹುಜಾ ಕೋಲ್ಕತ್ತಾದಿಂದ ಮುಂಬೈಗೆ ಧಾವಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Superstar Rajinikanth: ತಲೈವಾ ಆರೋಗ್ಯ ಸ್ಥಿತಿ ಬಗ್ಗೆ ಪತ್ನಿ ಲತಾರಿಂದ ಬಿಗ್‌ ಅಪ್ಡೇಟ್ಸ್‌

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ನಟ ಗೋವಿಂದ. ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇವರು ಅಸಂಖ್ಯಾತ ಅಭಿಮಾನಿ ಮನಸ್ಸು ಗೆದ್ದಿದ್ದಾರೆ. 2019ರಿಂದ ಗೋವಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ.