Saturday, 5th October 2024

Actor Govinda: ಆಕಸ್ಮಿಕವಾಗಿ ಸಿಡಿದ ಗುಂಡು; ನಟ ಗೋಂವಿಂದ ಕಾಲಿಗೆ ಗಾಯ

Actor Govinda

ಮುಂಬೈ: ಆಕಸ್ಮಿಕವಾಗಿ ಗುಂಡು ತಗುಲಿ ಬಾಲಿವುಡ್‌ನ ಖ್ಯಾತ ನಟ ಗೋವಿಂದ (Actor Govinda) ಅವರ ಕಾಲಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಸದ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಇಂದು (ಅಕ್ಟೋಬರ್‌ 1) ಮುಂಜಾನೆ 4.45ರ ಸುಮಾರಿಗೆ ಈ ಘಟನೆ ನಡೆದಿದೆ.

ಅವರು ತಮ್ಮ ರಿವಾಲ್ವರ್‌ ಅನ್ನು ಸ್ವಚ್ಛ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಸಿಡಿದ ಗುಂಡು ಅವರ ಕಾಲಿಗೆ ತಗುಲಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ನಡೆಯುವ ವೇಳೆ ಮನೆಯಲ್ಲಿ ಅವರೊಬ್ಬರೇ ಇದ್ದರು ಎನ್ನಲಾಗಿದೆ.

ಶಿವಸೇನೆ ನಾಯಕರೂ ಆಗಿರುವ 60 ವರ್ಷದ ಗೋವಿಂದ ಅವರು ಕೋಲ್ಕತ್ತಾಗೆ ತೆರಳಲು ಸಿದ್ಧರಾಗುತ್ತಿದ್ದರು. ಆ ವೇಳೆ ಘಟನೆ ನಡೆದಿದೆ ಎಂದು ಅವರ ಮ್ಯಾನೇಜರ್ ಶಶಿ ಸಿನ್ಹಾ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. ಬಂದೂಕು ಸ್ಫೋಟಗೊಂಡು ಗುಂಡು ಅವನ ಕಾಲಿಗೆ ತಗುಲಿತು. ವೈದ್ಯರು ಗುಂಡು ತೆಗೆದಿದ್ದಾರೆ ಮತ್ತು ಅವರ ಸ್ಥಿತಿ ಉತ್ತಮವಾಗಿದೆ ಎಂದು ಸಿನ್ಹಾ ಹೇಳಿದ್ದಾರೆ.

ಮ್ಯಾನೇಜರ್‌ ಹೇಳಿದ್ದೇನು?

ʼʼಗೋವಿಂದ ಅವರು ಕಾರ್ಯ ನಿಮಿತ್ತ ಕೋಲ್ಕತ್ತಾಗೆ ತೆರಳಲು ಸಿದ್ದರಾಗುತ್ತಿದ್ದರು. ಈ ವೇಳೆ ಅವರು ಪರವಾನಗಿ ಹೊಂದಿರುವ ತಮ್ಮ ರಿವಾಲ್ವರ್‌ ಅನ್ನು ಸ್ವಚ್ಛಗೊಳಿಸಲು ಕೈಗೆತ್ತಿಕೊಂಡಾಗ ಆಕಸ್ಮಿಕವಾಗಿ ಗುಂಡು ಸಿಡಿದು ಕಾಲಿಗೆ ಗಾಯವಾಗಿದೆ. ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ. ವೈದ್ಯರು ಬುಲೆಟ್‌ ಹೊರ ತೆಗೆದಿದ್ದಾರೆ. ಗೋವಿಂದ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆʼʼ ಎಂದು ಶಶಿ ಸಿನ್ಹಾ ವಿವರಿಸಿದ್ದಾರೆ.

ಕಾಮಿಡಿ ಪಾತ್ರಗಳಿಗೆ ಜೀವ ತುಂಬುವ ನಟ

ಒಂದು ಕಾಲದಲ್ಲಿ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಹಿರಿಯ ನಟ ಗೋವಿಂದ. ಹಾಸ್ಯ ಪ್ರಧಾನ ಸಿನಿಮಾಗಳಲ್ಲಿ ನಟಿಸುತ್ತಿದ್ದ ಇವರು ಅಸಂಖ್ಯಾತ ಅಭಿಮಾನಿ ಮನಸ್ಸು ಗೆದ್ದಿದ್ದಾರೆ. 2019ರಿಂದ ಗೋವಿಂದ ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 80 ಮತ್ತು 90 ದಶಕಗಳಲ್ಲಿ ಅವರ ಚಿತ್ರಗಳಿಗಾಗಿಯೇ ಅಭಿಮಾನಿಗಳು ಕಾದು ಕುಳಿತಿರುತ್ತಿದ್ದರು. ಆ ಸಮಯದಲ್ಲಿ ಬಾಲಿವುಡ್‌ನ ಟಾಪ್‌ ನಾಯಕ ಎನಿಸಿಕೊಂಡಿದ್ದರು. ಆದರೆ ಕ್ರಮೇಣ ಅವರ ಜನಪ್ರಿಯತೆ ಕಡಿಮೆಯಾಗುತ್ತಾ ಬಂತು. 2007ರಲ್ಲಿ ತೆರೆಕಂಡ ಸಲ್ಮಾನ್‌ ಖಾನ್‌ ಜೊತೆ ನಟಿಸಿದ್ದ ʼಪಾರ್ಟನರ್‌ʼ ಸಿನಿಮಾ ಗೋವಿಂದಾ ನಟಿಸಿದ್ದ ಕೊನೆಯ ಯಶಸ್ವಿ ಚಿತ್ರ. ಬಳಿಕ ಅಲ್ಲೊಂದು ಇಲ್ಲೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಯಾವುದೂ ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿಲ್ಲ.

2007ರಿಂದೀಚೆಗೆ ಗೋವಿಂದಾ ಅಭಿನಯದ ಸುಮಾರು 13 ಚಿತ್ರಗಳು ತೆರೆಕಂಡಿವೆ. ಆದರೆ ಇದ್ಯಾವುದೂ ಹಿಟ್‌ ಆಗಿಲ್ಲ. ʼರಂಗೀಲಾ ರಾಜʼ, ʼಪ್ರೈಡೇʼ, ʼಆ ಗಯಾ ಹೀರೋʼ, ʼಹ್ಯಾಪಿ ಎಂಡಿಂಗ್‌ʼ, ʼಕಿಲ್‌ ದಿಲ್‌ʼ, ʼದೀವಾನ ಮೇ ದೀವಾನʼ, ʼಲೂಟ್‌ʼ, ʼನಾಟಿ @ 40ʼ, ʼರಾವಣʼ, ʼಡು ನಾಟ್‌ ಡಿಸ್ಟರ್ಬ್‌ʼ, ʼಲೈಫ್‌ ಪಾರ್ಟನರ್‌ʼ, ʼಚಲ ತಲ ಚಲ್‌ʼ ಮತ್ತು ʼಮನಿ ಹೆ ತೊ ಹನಿ ಹೆʼ ಸಿನಿಮಾಗಳು ರಿಲೀಸ್‌ ಆದರೂ ಯಾವುದೂ ಯಶಸ್ವಿಯಾಗಲಿಲ್ಲ.

2019ರಲ್ಲಿ ತೆರೆಕಂಡ ʼರಂಗೀಲಾ ರಾಜʼ ಗೋವಿಂದಾ ಅಭಿನಯದ ಕೊನೆಯ ಚಿತ್ರ. ಬಳಿಕ ಅವರು ಹಲವು ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ: Superstar Rajinikanth : ಸೂಪರ್‌ಸ್ಟಾರ್ ರಜನಿಕಾಂತ್‌ ಆಸ್ಪತ್ರೆಗೆ ದಾಖಲು