Saturday, 23rd November 2024

Actor Nagarjun: ಅಪ್ಪ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದರು… ತಂದೆ ಅಕ್ಕಿನೇನಿ ನಾಗೇಶ್ವರ್‌ ರಾವ್‌ ಕುರಿತು ನಟ ನಾಗಾರ್ಜುನ್‌ ಭಾವನಾತ್ಮಕ ಮಾತು

Actor Nagarjun

ಪಣಜಿ : ತೆಲುಗಿನ ಹೆಸರಾಂತ ನಟ ನಾಗಾರ್ಜುನ್‌(Actor Nagarjun) ಅವರು ತಮ್ಮ ತಂದೆ ಅಕ್ಕಿನೇನಿ ನಾಗೇಶ್ವರ್‌ರಾವ್‌ (ANR)‌ ಅವರೊಂದಿಗಿನ ನೆನಪುಗಳನ್ನು ಸ್ಮರಿಸಿದ್ದಾರೆ. ತಮ್ಮ ತಂದೆ ಚಿತ್ರರಂಗದಲ್ಲಿ ನಡೆದು ಬಂದ ಹಾದಿ ಮತ್ತು ಮಗನಿಗೆ ಅವರು ತೋರುತ್ತಿದ್ದ ಪ್ರೀತಿಯ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಗೋವಾದ ಪಣಜಿಯಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ಮಾತನಾಡುತ್ತಾ, “ನಮ್ಮ ತಂದೆ ಆಂಧ್ರ ಮೂಲದ ಒಂದು ಸಣ್ಣ ಹಳ್ಳಿಯ ರೈತ ಕುಟುಂಬದಿಂದ ಬಂದವರು. ಆಗ ಆ ಊರಿನಲ್ಲಿ ಕರೆಂಟ್‌ ಸಂಪರ್ಕ ಕೂಡ ಇರಲಿಲ್ಲ. ನಮ್ಮ ಅಜ್ಜಿಗೆ ನನ್ನ ತಂದೆಯ ಬಗ್ಗೆ ಅತೀವ ಪ್ರೀತಿ. ಅದಕ್ಕೂ ಮೀರಿ ಅವರು ಹೆಣ್ಣು ಮಕ್ಕಳನ್ನು ಹೆಚ್ಚು ಪ್ರೀತಿಸುತ್ತಿದ್ದರು. ತಮಗೆ ಹೆಣ್ಣು ಮಗುವೊಂದು ಹುಟ್ಟಬೇಕೆಂದು ಅವರು ಬಯಸಿದ್ದರು. ಅದು ಸಾಧ್ಯವಾಗದಿದ್ದಾಗ, ನನ್ನ ತಂದೆಗೆ ಹೆಣ್ಣು ಮಕ್ಕಳ ಡ್ರೆಸ್‌ ತೊಡಿಸಿ ಅಜ್ಜಿ ಸಂಭ್ರಮಿಸುತ್ತಿದ್ದರು. ನನ್ನ ತಂದೆ ಹೆಣ್ಣು ಮಕ್ಕಳ ಬಟ್ಟೆಗಳನ್ನು ಧರಿಸಿ ಪೋಸ್‌ ಕೊಟ್ಟಿರುವ ಫೋಟೋಗಳನ್ನು ನಾನು ಸಂಗ್ರಹಿಸಿ ಇಟ್ಟಿದ್ದೇನೆ” ಎಂದು ತೆಲುಗು ಚಿತ್ರರಂಗದ ಸಂವಾದದಲ್ಲಿ ನಾಗಾರ್ಜುನ್‌ ಹೇಳಿದರು.

“ನನ್ನ ತಂದೆ ಹೆಣ್ಣು ಮಕ್ಕಳ ಡ್ರೆಸ್‌ ತೊಟ್ಟು ತೆಗೆಸಿರುವ ಫೋಟೋಗಳನ್ನು ನೋಡಿದಾಗ ಅವರು ಥೇಟ್‌ ನನ್ನ ಮೊದಲ ಅಕ್ಕ ಸತ್ಯಾಳ ರೀತಿಯೇ ಕಾಣಿಸುತ್ತಾರೆ. ನನ್ನ ತಂದೆ ಅಷ್ಟೊಂದು ಸುಂದರವಾಗಿದ್ದರು. ಬಹುಶಃ ಇದೇ ನನ್ನ ತಂದೆ ನಟರಾಗಲು ಕಾರಣ ಇರಬಹುದು” ಎಂದು ಹೇಳಿದರು. “ಇನ್ನೊಂದು ವಿಷಯವೆಂದರೆ ಆಗಿನ ನಾಟಕ ಮತ್ತು ಸಿನಿಮಾಗಳಲ್ಲಿ ಅಭಿನಯಿಸಲು ಸ್ತ್ರೀಯರು ಮುಂದೆ ಬರುತ್ತಿರಲಿಲ್ಲ. ಆಗ ನಮ್ಮ ಅಪ್ಪನೇ ಸ್ತ್ರೀ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದರು. ಅದ್ಭುತವಾಗಿ ನಟಿಸುತ್ತಿದ್ದರು. ಅಪ್ಪನಲ್ಲಿ ಆಗೆಲ್ಲಾ ಸ್ತ್ರೀಯರ ಮ್ಯಾನರಿಸಂ ಇತ್ತು. ಆಗ ನನ್ನ ತಂದೆಯನ್ನು ಜನರು ಸಾಕಷ್ಟು ಗೇಲಿ ಮಾಡಿ ಅವಮಾನ ಮಾಡಿದ್ದರು. ಅಪಹಾಸ್ಯ ಮಾಡಿ ನಕ್ಕಿದ್ದರು. ಅಪ್ಪ ಆಗ ನಿರಾಶೆಗೊಂಡು ಖಿನ್ನತೆಯನ್ನು ಅನುಭವಿಸಿದ್ದರು. ಆತ್ಮಹತ್ಯೆಗೂ ಯತ್ನಿಸಿದ್ದರಂತೆ. ಒಮ್ಮೆ ಅವರು ಮರೀನಾ ಬೀಚ್‌ನಲ್ಲಿ ಆತ್ಮಹತ್ಯೆಗ ಯತ್ನಿಸಿದ್ದು, ನೀರು ತಮ್ಮ ಸೊಂಟದವರೆಗೆ ಬರುವವರೆಗೂ ಸಮುದ್ರದೊಳಗೆ ಹೋಗಿದ್ದಾರೆ. ಆಮೇಲೆ ವಾಪಸ್‌ ಬಂದಿದ್ದಾರೆ. ಎಲ್ಲಾ ವಿಷಯವನ್ನು ಅಪ್ಪ ನನ್ನಲ್ಲಿ ಹೇಳಿಕೊಂಡಿದ್ದರು” ಎನ್ನುತ್ತಾ ನಾಗಾರ್ಜುನ್‌ ಮುಗುಳ್ನಕ್ಕರು.

“ಅಪ್ಪ ಹೀಗೊಮ್ಮೆ ರೈಲಿನಲ್ಲಿ ಎಲ್ಲಿಗೋ ಹೋಗುವಾಗ ಆಗಿನ ಕಾಲದ ಖ್ಯಾತ ನಿರ್ದೇಶಕರಾಗಿದ್ದ ಘಂಟಸಾಲ ಬಾಲರಾಮಯ್ಯ ಅವರ ಕಣ್ಣಿಗೆ ಬಿದ್ದಿದ್ದಾರೆ. ನಿನ್ನ ಕಣ್ಣುಗಳು ಮತ್ತು ಮೂಗು ಬಹಳ ಚೆನ್ನಾಗಿದೆ. ಸಿನಿಮಾದಲ್ಲಿ ನಟಿಸಲು ಇಷ್ಟವಿದೆಯಾ? ಎಂದು ಕೇಳಿದ್ದಾರೆ. ನಟಿಸಲು ಅವಕಾಶವನ್ನೂ ಕೊಟ್ಟರು. ಅಂದಿನಿಂದ ಮುಂದೆ ನಡೆದದ್ದೆಲ್ಲ ಈಗ ಇತಿಹಾಸʼ. ನನ್ನ ತಂದೆ ಬೇಡಿಕೆಯ ನಟರಾದರು ಎಂದು ತಮ್ಮ ತಂದೆಯನ್ನು ಸ್ಮರಿಸಿದರು.

ಅಕ್ಕಿನೇನಿ ನಾಗೇಶ್ವರ್‌ರಾವ್‌ ತೆಲುಗು ಚಿತ್ರರಂಗದಲ್ಲಿ ಎಎನ್‌ಆರ್‌ ಎಂದೇ ಪ್ರಸಿದ್ಧರಾಗಿದ್ದರು. ತಮ್ಮ ಏಳು ದಶಕಗಳ ಸಿನಿ ಜರ್ನಿಯಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಸ್ತ್ರೀ ಪಾತ್ರಧಾರಿಯಾಗಿ ನಟಿಸಿದ ಚಿತ್ರಗಳು ಅವರಿಗೆ ಹೆಸರನ್ನು ತಂದುಕೊಟ್ಟಿತ್ತು. ತಮ್ಮ ಮನೋಜ್ಞ ಅಭಿನಯದಿಂದಾಗಿ ಅಸಂಖ್ಯಾತ ಅಭಿಮಾನಿಗಳನ್ನು ಎಎನ್‌ಆರ್‌ ಗಳಿಸಿದ್ದರು. ನಾಗೇಶ್ವರ್‌ರಾವ್‌ ಅನೇಕ ಚಿತ್ರಗಳನ್ನೂ ನಿರ್ಮಿಸಿದ್ದರು. 1990 ರಲ್ಲಿ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಮತ್ತು 2011 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಯನ್ನು ಪಡೆದಿದ್ದರು. 91ನೇ ಹಿರಿವಯಸ್ಸಿನಲ್ಲಿ ಅವರು ವಿಧಿವಶರಾಗಿದರು.

ಈ ಸುದ್ದಿಯನ್ನೂ ಓದಿ: Salman Khan : ಸಲ್ಮಾನ್‌ ಖಾನ್‌ ಜೊತೆ ಸಿಕಂದರ್‌ ಸಿನಿಮಾ ಲಿರಿಸಿಸ್ಟ್‌ಗೂ ಜೀವ ಬೆದರಿಕೆ; ಕರ್ನಾಟಕ ಮೂಲದ ಕಿಡಿಗೇಡಿ ಅರೆಸ್ಟ್‌