Friday, 29th November 2024

Actor Nagarjuna: ನಟ ನಾಗಾರ್ಜುನ ಕುಟುಂಬದ ಅವಹೇಳನ; ಸಚಿವೆ ಕೊಂಡಾ ಸುರೇಖಾಗೆ ಸಮನ್ಸ್ ಜಾರಿ

Actor Nagarjuna

ಹೈದರಾಬಾದ್: ಚಿತ್ರ ನಟ ನಾಗಾರ್ಜುನ (Actor Nagarjuna) ಅವರ ಕುಟುಂಬದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ತೆಲಂಗಾಣ ಸಚಿವೆ (Telangana Minister) ಕೊಂಡಾ ಸುರೇಖಾ (Konda Surekha) ಅವರಿಗೆ ಹೈದರಾಬಾದ್ ನ್ಯಾಯಾಲಯ (Hyderabad court) ಸಮನ್ಸ್ ನೀಡಿದೆ. ಸುರೇಖಾ ಅವರು ಕಳೆದ ಅಕ್ಟೋಬರ್‌ನಲ್ಲಿ ನಾಗಾರ್ಜುನ ಅವರ ಮಗ ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಅವರ ವಿಚ್ಛೇದನಕ್ಕೆ ಸಂಬಂಧಿಸಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಸುರೇಖಾ ವಿರುದ್ಧ ನಟ ನಾಗಾರ್ಜುನ ಅವರು ಸಲ್ಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಡಿಸೆಂಬರ್ 12 ರಂದು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಹೈದರಾಬಾದ್ ನ್ಯಾಯಾಲಯವು ಗುರುವಾರ ಸಮನ್ಸ್ ನೀಡಿದೆ.

ಅಬಕಾರಿ ಪ್ರಕರಣಗಳ ವಿಶೇಷ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ (ಜೆಎಫ್‌ಸಿಎಂ) ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 356 (ಮಾನನಷ್ಟ) ಅಡಿಯಲ್ಲಿ ಸುರೇಖಾ ಅವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಅರಣ್ಯ ಸಚಿವೆ ಸುರೇಖಾ ಅವರು ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ಬಗ್ಗೆ ಮಾನಹಾನಿಕರ ಹೇಳಿಕೆ ನೀಡಿದ ಬಳಿಕ ರಾಜಕೀಯ ನಾಯಕರು ಮತ್ತು ತೆಲುಗು ಚಿತ್ರರಂಗದಿಂದ ತೀವ್ರ ವಿರೋಧ ಎದುರಿಸಿದ್ದರು. ಇದರಿಂದ ಬಳಿಕ ಅವರು ತಮ್ಮ ಹೇಳಿಕೆಗಳನ್ನು ಹಿಂದಕ್ಕೆ ಪಡೆದಿದ್ದರು.

ನಟ ನಾಗಾರ್ಜುನ ಅವರು ಸುರೇಖಾ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಯಾಕೆಂದರೆ ಸುರೇಖಾ ಅವರು ತಮ್ಮ ಮಗ ನಾಗ ಚೈತನ್ಯ ವಿರುದ್ಧ ಹೇಳಿಕೆ ನೀಡಿದ್ದಾರೆ ಎಂದು ದೂರಿದ್ದರು. ಈ ಹಿಂದೆ ನಾಗಾರ್ಜುನ ಮತ್ತಿತರರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ.

ಕೊಂಡಾ ಸುರೇಖಾ ಹೇಳಿದ್ದೇನು?

ಸುದ್ದಿಗಾರರೊಂದಿಗೆ ಮಾತನಾಡಿದ್ದ ಸುರೇಖಾ ಅವರು, ನಾಗಚೈತನ್ಯ ಮತ್ತು ಸಮಂತಾ ಅವರ ವಿಚ್ಛೇದನಕ್ಕೆ ಕೆ.ಟಿ. ರಾಮರಾವ್ ಅವರೇ ಕಾರಣ. ಆಗ ಸಚಿವರಾಗಿದ್ದ ಅವರು ನಟಿಯರ ಫೋನ್ ಟ್ಯಾಪ್ ಮಾಡಿ ಅನಂತರ ಅವರ ದೌರ್ಬಲ್ಯಗಳನ್ನು ಕಂಡು ಬ್ಲಾಕ್ ಮೇಲ್ ಮಾಡುತ್ತಿದ್ದರು. ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುತ್ತಿದ್ದರು. ಇದು ಎಲ್ಲರಿಗೂ ಗೊತ್ತು. ಸಮಂತಾ, ನಾಗ ಚೈತನ್ಯ, ಅವರ ಕುಟುಂಬಕ್ಕೂ ಇದರ ಅನುಭವವಾಗಿದೆ ಎಂದು ಹೇಳಿದ್ದರು.

ತಮ್ಮ ಹೇಳಿಕೆಯ ನಡುವೆ ಅವರು ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು ನಡುವಿನ ವಿಚ್ಛೇದನವನ್ನು ಉಲ್ಲೇಖಿಸಿದ್ದಾರೆ. ಇದು ಕೇವಲ ಅಕ್ಕಿನೇನಿ ಕುಟುಂಬದ ಆಕ್ರೋಶಕ್ಕೆ ಕಾರಣವಾಗಿರುವುದು ಮಾತ್ರವಲ್ಲ ಇದನ್ನು ನಟ ಜೂನಿಯರ್ ಎನ್‌ಟಿಆರ್ ಮತ್ತು ಚಿತ್ರನಿರ್ಮಾಪಕ ಎಸ್‌.ಎಸ್. ರಾಜಮೌಳಿ ಕೂಡ ಖಂಡಿಸಿದ್ದರು.

Actor Darshan: ದರ್ಶನ್‌ ಜಾಮೀನು ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

ಈ ಕುರಿತು ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದ ನಾಗಾರ್ಜುನ ಅವರು, ಸಚಿವ ಕೊಂಡ ಸುರೇಖಾ ಅವರ ಹೇಳಿಕೆಯನ್ನು ಖಂಡಿಸುವುದಾಗಿ ಹೇಳಿದ್ದಾರೆ. ಅಲ್ಲದೇ ರಾಜಕೀಯದಿಂದ ದೂರವಿರುವ ಸಿನಿಮಾ ತಾರೆಯರ ಜೀವನವನ್ನು ತಮ್ಮ ರಾಜಕೀಯ ವಿರೋಧಿಗಳನ್ನು ಟೀಕಿಸಲು ಬಳಸಬೇಡಿ. ದಯವಿಟ್ಟು ಇತರರ ಖಾಸಗಿತನವನ್ನು ಗೌರವಿಸಿ. ಜವಾಬ್ದಾರಿಯುತ ಸ್ಥಾನದಲ್ಲಿರುವ ಮಹಿಳೆಯಾಗಿ ನಿಮ್ಮ ಆರೋಪಗಳನ್ನು ಸಂಪೂರ್ಣ ಅಪ್ರಸ್ತುತವಾಗಿದೆ. ನಿಮ್ಮ ಹೇಳಿಕೆಯನ್ನು ತಕ್ಷಣವೇ ಹಿಂಪಡೆಯಿರಿ ಎಂದಿದ್ದರು.