Saturday, 14th December 2024

Whatsapp ಗ್ರೂಪ್‌ನಲ್ಲಿ ಹರಿದಾಡುವ ಸಂದೇಶ, ಚಿತ್ರಗಳಿಗೆ ಆಡ್ಮಿನ್‌ ಹೊಣೆಯಲ್ಲ: ಬಾಂಬೆ ಹೈಕೋರ್ಟ್‌

ಮುಂಬೈ: ವಾಟ್ಸ್ ಆಪ್ ಸದಸ್ಯರ ಯಾವುದೇ ಆಕ್ಷೇಪಾರ್ಹ ಪೋಸ್ಟ್ ಗಳಿಗೆ ಗ್ರೂಪ್ ನ ನಿರ್ವಾಹಕರು(ಆಡ್ಮಿನ್‌) ಹೊಣೆಯಲ್ಲ ಎಂದು ಬಾಂಬೆ ಹೈಕೋರ್ಟ್ ನ ಪೀಠ ಮಹತ್ವದ ಆದೇಶ ಪ್ರಕಟಿಸಿದೆ.

ಮಹಿಳೆಗೆ ಸಂಬಂಧಿಸಿದಂತೆ ವಾಟ್ಸ್ ಆಪ್ ಗ್ರೂಪ್ ಒಂದರ ಸದಸ್ಯರೊಬ್ಬರು ಆಕ್ಷೇಪಾರ್ಹವಾಗಿ ಪೋಸ್ಟ್ ನ್ನು ಹಾಕಿದ್ದರು. ಇದರ ವಿರುದ್ಧ ವಾಟ್ಸ್ ಆಪ್ ಗ್ರೂಪ್ ನ ನಿರ್ವಾಹಕ ಕಿಶೋರ್ ಟ್ಯಾರೋನ್ (33) ಎಂಬಾತನ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ಮಹಿಳೆಯೊಬ್ಬರು ದಾಖಲಿಸಿದ್ದರು.

ಆಕ್ಷೇಪಾರ್ಹ ಪೋಸ್ಟ್ ನ್ನು ನಿರ್ವಾಹಕರು ಡಿಲೀಟ್ ಮಾಡಿಲ್ಲ ಹಾಗೂ ಪೋಸ್ಟ್ ಹಾಕಿದ್ದ ವ್ಯಕ್ತಿಯನ್ನು ಕ್ಷಮೆ ಕೋರುವಂತೆ ಕೇಳ ಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ಆದರೆ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸುವಂತೆ ಕಿಶೋರ್ ಕೋರ್ಟ್ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಝೆದ್ ಎ ಹಕ್ ಹಾಗೂ ಎಬಿ ಬೋರ್ಕಾರ್ ಅವರಿದ್ದ ಪೀಠ, ವಾಟ್ಸ್ ಆಪ್ ಗ್ರೂಪ್ ನ ನಿರ್ವಾ ಹಕರು ಗುಂಪಿನ ಸದಸ್ಯರು ಹಾಕುವ ಪೋಸ್ಟ್ ಗಳಿಗೆ ಹೊಣೆಯಾಗುವುದಿಲ್ಲ, ಅವರನ್ನು ಹೊಣೆಗಾರರನ್ನಾಗಿ ಮಾಡಲಾಗದು ಎಂದು ಹೇಳಿದೆ.

ಗ್ರೂಪ್ ನ ನಿರ್ವಾಹಕರಿಗೆ ಪೋಸ್ಟ್ ಗಳನ್ನು ನಿಯಂತ್ರಿಸುವುದಕ್ಕೆ ಅಥವಾ ಅದನ್ನು ಪ್ರಕಟಿಸುವ ಮೊದಲೇ ಸೆನ್ಸಾರ್ ಮಾಡುವು ದಕ್ಕೆ ಅಧಿಕಾರವಿಲ್ಲ. ಆದರೆ, ಯಾವುದೇ ಸದಸ್ಯ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾದಂತಹ ಅಂಶಗಳನ್ನು ಹಾಕಿದರೆ ಅಂತಹ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬಹುದು ಎಂದು ನ್ಯಾಯಾಲಯ ಹೇಳಿದೆ.