Saturday, 14th December 2024

Agni-4 Launch: ಪರಮಾಣು ಬಾಂಬ್‌ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ

agni 4 ballistic missile

ಹೊಸದಿಲ್ಲಿ: ಒಡಿಶಾ ಕರಾವಳಿಯ ಚಂಡೀಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಭಾರತ ಶುಕ್ರವಾರ ಅಗ್ನಿ-4 ದೂರವ್ಯಾಪ್ತಿಯ ಮಧ್ಯಮ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (ballistic missile) ಯಶಸ್ವಿಯಾಗಿ (Agni-4 Launch) ಪರೀಕ್ಷಿಸಿದೆ. ಇದೊಂದು ಪರಮಾಣು ಸಿಡಿತಲೆ (nuclear powered) ಹೊತ್ತೊಯ್ಯಬಲ್ಲ ಕ್ಷಿಪಣಿಯಾಗಿದ್ದು, ಈ ಪರೀಕ್ಷೆಯಲ್ಲಿ ಅಗ್ನಿ ಕ್ಷಿಪಣಿ ನಿಗದಿತ ಮಾನದಂಡಗಳನ್ನು ಪೂರೈಸಿದೆ.

ಇದೊಂದು ತರಬೇತಿ ಉಡಾವಣೆ ಎಂದು ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ ಹೇಳಿದೆ. ಇದರಲ್ಲಿ ಎಲ್ಲಾ ಕಾರ್ಯಾಚರಣೆಯ ನಿಯತಾಂಕಗಳನ್ನು ಮರು-ಪರಿಶೀಲಿಸಲಾಗಿದೆ. ಭಾರತವು ಈ ಪರೀಕ್ಷೆಯ ಮೂಲಕ ತನ್ನ ಕನಿಷ್ಠ ನಿರೋಧಕ ಸಾಮರ್ಥ್ಯವನ್ನು ಕಾಪಾಡಿಕೊಂಡಿದೆ ಎಂದು ತೋರಿಸಿದೆ. ಇದು ಭಾರತದ ಸ್ಟ್ರಾಟೆಜಿಕ್ ಫೋರ್ಸ್ ಕಮಾಂಡ್‌ನ ಅಗ್ನಿ ಕ್ಷಿಪಣಿ ಸರಣಿಯ ನಾಲ್ಕನೇ ಅಪಾಯಕಾರಿ ಬ್ಯಾಲಿಸ್ಟಿಕ್ ಕ್ಷಿಪಣಿ. ಇದು ತನ್ನ ವ್ಯಾಪ್ತಿಯ ವಿಶ್ವದ ಇತರ ಕ್ಷಿಪಣಿಗಳಿಗಿಂತ ಹಗುರವಾಗಿದೆ.

ಅಗ್ನಿ-4 ಕ್ಷಿಪಣಿಯನ್ನು DRDO ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದರ ತೂಕ 17 ಸಾವಿರ ಕಿಲೋಗ್ರಾಂ. ಇದರ ಉದ್ದ 66 ಅಡಿ. ಇದರಲ್ಲಿ ಮೂರು ಬಗೆಯ ಆಯುಧಗಳನ್ನು ಒಯ್ಯಬಹುದು. ಇದು ಸಾಂಪ್ರದಾಯಿಕ, ಥರ್ಮೋಬಾರಿಕ್ ಮತ್ತು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ. ಅಗ್ನಿ-4 ರ ಸಕ್ರಿಯ ವ್ಯಾಪ್ತಿಯು 3500 ರಿಂದ 4000 ಕಿಲೋಮೀಟರ್. ಇದು ಗರಿಷ್ಠ 900 ಕಿಲೋಮೀಟರ್ ಎತ್ತರದವರೆಗೆ ನೇರವಾಗಿ ಹಾರಬಲ್ಲದು. ಇದರ ನಿಖರತೆ 100 ಮೀಟರ್. ಅಂದರೆ ದಾಳಿ ಮಾಡುವಾಗ, 100 ಮೀಟರ್ ತ್ರಿಜ್ಯದೊಳಗೆ ಬರುವ ಎಲ್ಲಾ ವಸ್ತುಗಳನ್ನು ನಾಶಪಡಿಸುತ್ತದೆ. ಅಂದರೆ ಶತ್ರು ಅಥವಾ ಬಯಸಿದರೂ ದೂರ ಓಡಿಹೋಗಲಾರದು.

ಅಗ್ನಿ-4 ಅನ್ನು 8×8 ಟ್ರಾನ್ಸ್‌ಪೋರ್ಟರ್ ಎರೆಕ್ಟರ್ ಲಾಂಚರ್ ಅಥವಾ ರೈಲ್ ಮೊಬೈಲ್ ಲಾಂಚರ್‌ನಿಂದ ಉಡಾವಣೆ ಮಾಡಲಾಗಿದೆ. ಇದರ ನ್ಯಾವಿಗೇಶನ್ ಅನ್ನು ಡಿಜಿಟಲ್ ಮೂಲಕ ನಿಯಂತ್ರಿಸಬಹುದು. ಇದರ ಏವಿಯಾನಿಕ್ಸ್ ವ್ಯವಸ್ಥೆಯು ವಿಶ್ವಾಸಾರ್ಹವಾಗಿದ್ದು, ಇದನ್ನು ಅತ್ಯಂತ ನಿಖರತೆಯಿಂದ ಶತ್ರುಗಳ ಕಡೆಗೆ ಉಡಾಯಿಸಬಹುದು. ಅಗ್ನಿ-4 ರ ಮೊದಲ ಯಶಸ್ವಿ ಪರೀಕ್ಷೆಯು 15 ನವೆಂಬರ್ 2011ರಂದು ನಡೆಯಿತು. ನಂತರ ಇತ್ತೀಚಿನ ಪರೀಕ್ಷೆಗಳು ಸೇರಿದಂತೆ ಒಟ್ಟು 8 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರಲ್ಲಿ ಒಂದು ಟನ್ ಶಸ್ತ್ರಾಸ್ತ್ರಗಳನ್ನು ತುಂಬಿಸಬಹುದು. ಈ ಕ್ಷಿಪಣಿಯು 3000 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಸಹಿಸಿಕೊಂಡು ವಾತಾವರಣವನ್ನು ಪ್ರವೇಶಿಸಬಲ್ಲುದು. ಭವಿಷ್ಯದಲ್ಲಿ ಬಾಹ್ಯಾಕಾಶದಲ್ಲಿ ದಾಳಿ ಮಾಡಲೂ ಇದನ್ನು ಬಳಸಬಹುದು.

ಈ ಸುದ್ದಿ ಓದಿ: ಉಕ್ರೇನ್‌: ರಷ್ಯಾ ಕ್ಷಿಪಣಿ ದಾಳಿ, ಮೃತರ ಸಂಖ್ಯೆ 6ಕ್ಕೆ ಏರಿಕೆ