ನವದೆಹಲಿ: ದಿಲ್ಲಿಯ ವಾಯುಮಾಲಿನ್ಯಕ್ಕೆ ಕಾರಣವಾಗಿರುವ ಕೃಷಿ ತ್ಯಾಜ್ಯ ಸುಡುವುದಕ್ಕೆ ಕೂಡಲೇ ತಡೆ ಹಾಕಿ ಎಂದು ಸುಪ್ರೀಂ ಕೋರ್ಟ್ ಪಂಜಾಬ್ ಸೇರಿದಂತೆ ಐದು ರಾಜ್ಯಗಳಿಗೆ ಇಂದು ತಾಕೀತು ಮಾಡಿತು.
ಪಂಜಾಬ್, ಹರಿಯಾಣ, ದಿಲ್ಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳ ರೈತರು ಕೃಷಿ ತ್ಯಾಜ್ಯ ಸುಡುವುದರ ಕುರಿತು ಮಂಗಳವಾರ ಸುಪ್ರೀಂ ಕೋರ್ಟ್ ಆಯಾ ರಾಜ್ಯಗಳನ್ನು ತರಾಟೆಗೆ ತೆಗೆದುಕೊಂಡಿತು. ದೆಹಲಿಯು ವರ್ಷದಿಂದ ವರ್ಷಕ್ಕೆ ತೀವ್ರ ವಾಯು ಮಾಲಿನ್ಯವನ್ನು ಎದುರಿಸುತ್ತಿದೆ. ಮುಂದೆಯೂ ಇದನ್ನು ಎದುರಿಸಲು ಸಾಧ್ಯವಿಲ್ಲ. ಪರಿಹಾರಕ್ಕಾಗಿ ಕಾರ್ಯೋನ್ಮುಖರಾಗಿ ಎಂದು ಉನ್ನತ ನ್ಯಾಯಾಲಯದ ಪೀಠ ನಿರ್ದೇಶಿಸಿದೆ.
ಮುಖ್ಯವಾಗಿ ಪಂಜಾಬ್ ಸರ್ಕಾರವನ್ನು ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
ಕಳೆದ ಒಂದು ವಾರದಿಂದ ವಿಷಮಿಸಿರುವ ರಾಜಧಾನಿಯ ವಾಯು ಗುಣಮಟ್ಟ ಮಂಗಳವಾರವೂ ಹಾಗೇ ಮುಂದುವರಿದಿದೆ. ದೆಹಲಿಯ ಕೆಲವು ಭಾಗಗಳಲ್ಲಿ ದಟ್ಟವಾದ ಹೊಗೆಯ ಮೋಡಗಳು ಆವರಿಸಿವೆ. ಪಂಜಾಬ್ ಮತ್ತು ಹರಿಯಾಣದಲ್ಲಿ ಭತ್ತದ ಒಣಹುಲ್ಲಿನ ಸುಡುವಿಕೆಯು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ದೆಹಲಿಯಲ್ಲಿ ವಾಯುಮಾಲಿನ್ಯ ಮಟ್ಟದಲ್ಲಿ ಅಪಾಯಕಾರಿ ಏರಿಕೆಗೆ ಕಾರಣವಾಗುತ್ತಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರ ಪೀಠವು ವಾಯು ಮಾಲಿನ್ಯದ ಕುರಿತು ವಿಚಾರಣೆ ನಡೆಸಿತು.