ಅಹಮದಾಬಾದ್: ಗುಜರಾತಿನ ಆನಂದ್ ಪಟ್ಟಣದ ಬಳಿ ಅಹಮದಾಬಾದ್-ವಡೋದರಾ ಎಕ್ಸ್ಪ್ರೆಸ್ವೇಯಲ್ಲಿ ಸೋಮವಾರ ಭೀಕರ ಅಪಘಾತ ಸಂಭವಿಸಿದ್ದು, ಆರು ಜನರು ಮೃತಪಟ್ಟು, ಅನೇಕರು ಗಾಯಗೊಂಡಿದ್ದಾರೆ.
ಬೆಳಿಗ್ಗೆ 4: 30 ರ ಸುಮಾರಿಗೆ ಚಿಖೋದ್ರಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಅಹ್ಮದಾಬಾದ್ ಗೆ ತೆರಳುತ್ತಿದ್ದ ಖಾಸಗಿ ಬಸ್ ಟೈರ್ ಸ್ಫೋಟಗೊಂಡು ರಸ್ತೆ ಬದಿಗೆ ಉರುಳಿ ಬಿದ್ದಿದೆ.
ಟೈರ್ ಬದಲಾಯಿಸುವಾಗ, ಬಸ್ ಪ್ರಯಾಣಿಕರು ಇಳಿದರು ಮತ್ತು ಕೆಲವರು ವಾಹನದ ಮುಂದೆ ಕಾಯುತ್ತಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ಟ್ರಕ್ ಹಿಂದಿನಿಂದ ಬಸ್ ಗೆ ಡಿಕ್ಕಿ ಹೊಡೆದಿದೆ. ಐವರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಲ್ಲಿ ಬಸ್ ಚಾಲಕ ಕೂಡ ಸೇರಿದ್ದಾರೆ.
ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಮತ್ತು ಮೂವರು ಪುರುಷರು ಸೇರಿದ್ದಾರೆ, ಅವರನ್ನು ಇನ್ನೂ ಗುರುತಿಸಲಾಗಿಲ್ಲ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.