Saturday, 23rd November 2024

Ajaz Khan : ಇನ್‌ಸ್ಟಾಗ್ರಾಂನಲ್ಲಿ 5.6 ಮಿಲಿಯನ್‌ ಫಾಲೋವರ್ಸ್‌- ಬಂದ ವೋಟ್‌ ಕೇವಲ 103! ಬಿಗ್‌ ಬಾಸ್ ಸ್ಪರ್ಧಿ ಬಗ್ಗೆ ಫುಲ್‌ ಟ್ರೋಲ್‌

Maharashtra Assembly election

ಮುಂಬೈ : ಮಹಾರಾಷ್ಟ್ರದಲ್ಲಿ ವಿಧಾನ ಸಭಾ ಚುನಾವಣೆಯ (Maharashtra Assembly election) ಫಲಿತಾಂಶ ಹೊರಬಿದ್ದಿದ್ದು, ವರ್ಸೋವಾ ಕ್ಷೇತ್ರದಿಂದ (Versova constituency) ಸ್ಪರ್ಧಿಸಿದ್ದ ಮಾಜಿ ಬಿಗ್‌ ಬಾಸ್‌ ಸ್ಪರ್ಧಿ ಹಾಗೂ ರಾಜಕಾರಣಿಯಾಗಿರುವ  ಅಜಾಜ್ ಖಾನ್ (Ajaz Khan) ಇದೀಗ ಸುದ್ದಿಯಲ್ಲಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಬರೋಬ್ಬರಿ  5.6 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿರುವ ಅಜಾಜ್ ಖಾನ್ ಚುನಾವಣೆಯಲ್ಲಿ ಕೇವಲ 103 ಮತಗಳನ್ನು ಗಳಿಸುವ ಮೂಲಕ ತೀರ ಮುಖಭಂಗ ಎದುರಿಸಿದ್ದಾರೆ.

ವರ್ಸೋವಾ ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ಅವರ ಆಜಾದ್ ಸಮಾಜ ಪಾರ್ಟಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಜಾಜ್ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದರು. ಆದರೆ ಮತದಾರ ಮಾತ್ರ ಅವರ ಮೇಲೆ ಒಲವು ತೋರಲಿಲ್ಲ. ಶಿವಸೇನೆಯ ಯುಬಿಟಿ ಅಭ್ಯರ್ಥಿ ಹರೂನ್ ಖಾನ್ ವರ್ಸೋವಾ ಕ್ಷೇತ್ರದಲ್ಲಿ ಅತ್ಯಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಅಚ್ಚರಿಯೆಂದರೆ ಅಜಾಜ್ ಖಾನ್‌ಗೆ ಬಿದ್ದ ಮತಗಳಿಗಿಂತ ಹೆಚ್ಚು ನೋಟಾಗೆ ಜನ ಮತ ನೀಡಿದ್ದಾರೆ.

ಚುನಾವಣಾ ಫಲಿತಾಂಶ ನೋಡಿದ ಜನರು ಅಜಾಜ್ ಖಾನ್‌ರನ್ನು ಟ್ರೋಲ್‌ ಮಾಡುತ್ತಿದ್ದು, ಇನ್‌ಸ್ಟಾಗ್ರಾಂನಲ್ಲಿ 5.6 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್‌ ಹೊಂದಿದ್ದರೆ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗಳು ಹರಿದಾಡುತ್ತಿದ್ದು, ಮತ ಹಾಕುವವರು ಬಿಗ್‌ ಬಾಸ್‌ ನೋಡುವ  16 ವರ್ಷದ ಮಕ್ಕಳಲ್ಲ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ಮುಂಬೈ ಉತ್ತರ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಅಲ್ಲಿಯೂ ಗೆಲುವನ್ನು ಕಂಡಿರಲಿಲ್ಲ ಈಗ ಮತ್ತೊಂದು ಸಲ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಆದರೆ ಈ ಬಾರಿಯೂ ಸೋಲನ್ನು ಕಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ಚುನಾವಣಾ ಫಲಿತಾಂಶ ಬಂದಿದ್ದು, ಮಹಾಯುತಿ ಐತಿಹಾಸಿಕ ಸಾಧನೆಯನ್ನು ಮಾಡಿ, ಚುನಾವಣೆಯಲ್ಲಿ ಗೆದ್ದು ಬೀಗಿದೆ. ಬಿಜೆಪಿ , ಶಿಂಧೆ ಬಣ ಹಾಗೂ ಅಜಿತ್‌ ಪವರ್‌ರನ್ನೊಳಗೊಂಡ ಮಹಾಯುತಿ ಸಂಪೂರ್ಣ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. ಪ್ರತಿಷ್ಠೆಯ ಕಣವಾಗಿದ್ದ ಮಹಾರಾಷ್ಟ್ರದಲ್ಲಿ ಕೇಸರಿ ಆಡಳಿತ ಶುರುವಾಗಲಿದೆ. ನಿಜವಾದ ಎನ್‌ಸಿಪಿ ತಾವೇ ಎಂದು ಹೇಳಿಕೊಳ್ಳುತ್ತಿದ್ದ ಶರತ್‌ ಪವಾರ್‌ ಬಣಕ್ಕೆ ಭಾರಿ ಮುಖಭಂಗವಾಗಿದೆ. ಇಬ್ಬಾಗವಾಗಿದ್ದ ಶಿವಸೇನೆಯ ಶಿಂಧೆ ಬಣ ಮೇಲುಗೈ ಸಾಧಿಸಿ ಠಾಕ್ರೆ ಶಿವಸೇನೆಗೆ ಸೋಲಿನ ರುಚಿಯನ್ನು ತೋರಿಸಿದ್ದಾರೆ.

ಮಹಾ ಅಘಾಡಿಗೆ ʼಮಹಾʼ ಆಘಾತ

ಜಾರ್ಖಂಡ್‌ ಹಾಗೂ ಕರ್ನಾಟಕದಲ್ಲಿ ಗೆದ್ದು ಬೀಗಿದ ಕಾಂಗ್ರೆಸ್‌ ಮಹಾರಾಷ್ಟ್ರದಲ್ಲಿ ಮುಗ್ಗರಿಸಿದೆ. ಮತದಾರ ಮಹಾ ಅಘಾಡಿಗೆ ಆಘಾತ ನೀಡಿದ್ದು, ಮೈತ್ರಿ ಪಕ್ಷಗಳು ಅತೀ ಕಡಿಮೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ : Ajit Pawar: ಮಹಾರಾಷ್ಟ್ರದ ಮುಂದಿನ ಸಿಎಂ ಅಜಿತ್‌ ಪವಾರ್‌? ರಿಸಲ್ಟ್‌ಗೂ ಮುನ್ನ ರಾರಾಜಿಸಿದ ಪೋಸ್ಟರ್‌