ಛತ್ತೀಸ್ಗಢ: ಹಾವುಗಳೆಂದರೆ ಸಾಕು ಅಯ್ಯೋ ಎಂದು ಬಲುದೂರ ಓದುವವರೇ ಹೆಚ್ಚು. ಇನ್ನು ಕೆಲವರು ಹಾವು ಕಂಡೊಡನೆ ಅದಕ್ಕೆ ಕಲ್ಲು ದೊಣ್ಣೆಯಿಂದ ಹೊಡೆದು ಸಾಯಿವವರೂ ಇದ್ದಾರೆ. ಈ ಎರಡು ವರ್ಗಗಳ ನಡುವೆ ಹಾವುಗಳೂ ಒಂದು ಜೀವಿ ಅದಕ್ಕೂ ಬದುಕುವ ಹಕ್ಕಿದೆ ಎಂದು ಅವುಗಳ ರಕ್ಷಣೆ ಪಣತೊಟ್ಟ ಉರಗ ರಕ್ಷಕರಿದ್ದಾರೆ. ಅಂತಹ ಉರಗ ರಕ್ಷಕಿಯೊಬ್ಬರು ಇದೋಗ ಅತಿ ಹೆಚ್ಚು ಹಾವು ರಕ್ಷಣೆ ಮೂಲಕ ದಾಖಲೆ ಬರೆದಿದ್ದಾರೆ.
ಬಿಲಾಸ್ಪುರದಲ್ಲಿ ನರ್ಸಿಂಗ್ ಆಫೀಸರ್ ಆಗಿ ಕೆಲಸ ಮಾಡುತ್ತಿರುವ ಅಜಿತಾ ಪಾಂಡೆ(Ajita Pandey) ಅವರು ಸಾಕಷ್ಟು ಹಾವುಗಳನ್ನು ರಕ್ಷಿಸಿದ್ದಾರೆ. ವಿಷಕಾರಿ ಹಾವುಗಳ ಜೊತೆಗೆ ಅವರು ನಿರ್ಭಿತಿಯಿಂದ ಹಾಗೂ ಶಾಂತ ಸ್ವಭಾವದಿಂದ ನಡೆದುಕೊಳ್ಳುವುದರಿಂದ ಅಜಿತಾ ಅವರಿಗೆ “ಸ್ನೇಕ್ ಗರ್ಲ್” ಎಂಬ ಅಡ್ಡಹೆಸರೂ ನೀಡಲಾಗಿದೆ. ನರ್ಸಿಂಗ್ ಆಫೀಸರ್ ಆಗಿ ಕೆಲಸ ಮಾಡುವುದರ ಜೊತೆಗೆ, ಅಜಿತಾ ಕಳೆದ ಕೆಲವು ವರ್ಷಗಳಿಂದ ಸಾವಿರಾರು ಹಾವುಗಳನ್ನು ರಕ್ಷಿಸಿ ಕಾಡಿನಲ್ಲಿ ಬಿಟ್ಟಿದ್ದಾರೆ. ಆ ಅಪಾಯಕಾರಿ ರಕ್ಷಣಾ ಕಾರ್ಯಾಚರಣೆಯ ವಿಡಿಯೊಗಳನ್ನು ಅವರು 1.25 ಲಕ್ಷ ಫಾಲೋವರ್ಸ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಅಜಿತಾ ಪ್ರಾಣಿ ಪ್ರಿಯರ ಕುಟುಂಬದಿಂದ ಬಂದವರು. ಹಾಗಾಗಿ ಅವರು ತಮ್ಮ ವಾಸಸ್ಥಳದಲ್ಲಿ 18-20 ನಾಯಿಗಳು, ಹಸುಗಳು ಮತ್ತು ಕರುಗಳಿಗೆ ನೆಲೆ ನೀಡಿದ್ದಾರೆ. ಅವರು ಮೊದಲ ಬಾರಿಗೆ ಛತ್ತೀಸ್ಗಢದಲ್ಲಿ ಹಾವಾಡಿಗರನ್ನು ಭೇಟಿಯಾಗಿದ್ದಾರೆ. ಅವರು 18 ನೇ ವಯಸ್ಸಿನಲ್ಲಿ ಹಾವುಗಳನ್ನು ರಕ್ಷಿಸುವ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡರು. ಹಾವು ಹಿಡಿಯುವ ಕೆಲಸ ಮತ್ತು ಅದರಲ್ಲಿ ಎದುರಾಗುವ ಸವಾಲುಗಳನ್ನು ಅರ್ಥಮಾಡಿಕೊಳ್ಳಲು, ಅವರು ಹಲವಾರು ಪುಸ್ತಕಗಳು, ಪತ್ರಿಕೆಗಳನ್ನು ಓದಿದ್ದರಂತೆ.
ತನ್ನ ಸಂಶೋಧನೆಯ ಮೂಲಕ, ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳಲು ಹಾವುಗಳ ಅಸ್ತಿತ್ವವು ಏಕೆ ಮುಖ್ಯವಾಗಿದೆ ಎಂಬುದರ ಬಗ್ಗೆ ಅಜಿತಾ ಹೆಚ್ಚು ತಿಳಿದುಕೊಂಡರು. ವಿವಿಧ ಸರಿಸೃಪ ಪ್ರಭೇದಗಳ ಬಗ್ಗೆ ಜ್ಞಾನವನ್ನು ಪಡೆದ ನಂತರ, ಕೆಲವು ಹಾವುಗಳು ಜೀವಕ್ಕೆ ಅಪಾಯವನ್ನುಂಟುಮಾಡಬಹುದು ಆದರೆ ಅವುಗಳಲ್ಲಿ ಹೆಚ್ಚಿನವು ವಿಷಕಾರಿಯಲ್ಲ ಎಂಬುದನ್ನು ಅಜಿತಾ ಕಂಡುಕೊಂಡರು.
ತನ್ನ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಅಜಿತಾ, ಹಾವುಗಳನ್ನು ಅನಗತ್ಯವಾಗಿ ಕೊಲ್ಲುವುದರಿಂದ ಉಂಟಾಗುವ ಪರಿಣಾಮಗಳು ಮತ್ತು ಅವುಗಳಿಂದಾಗುವ ಪರಿಸರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಜೀವಿಗಳಿಗೆ ಹಾನಿ ಮಾಡುವ ಬದಲು ತನ್ನಂತಹ ತಜ್ಞರ ಸಹಾಯವನ್ನು ಪಡೆಯುವ ಮಾರ್ಗವನ್ನು ಅವರು ಸೂಚಿಸಿದ್ದಾರೆ. ವಿಷಕಾರಿ ಹಾವು ಕಚ್ಚಿದರೆ ಅದರಿಂದ ಜೀವವನ್ನು ಕಾಪಾಡಿಕೊಳ್ಳಲು ವೈದ್ಯರ ಬಳಿ ಹೋಗುವಂತೆ ಅವರು ಜನರನ್ನು ಪ್ರೋತ್ಸಾಹಿಸಿದ್ದಾರೆ.
ಇತ್ತೀಚಿನ ತನ್ನ ವಿಡಿಯೊವೊಂದರಲ್ಲಿ, ಅಜಿತಾ ವಿಷಕಾರಿಯಲ್ಲದ ಹಾವೊಂದನ್ನು ಬರಿಗೈಯಿಂದ ರಕ್ಷಿಸಿದ್ದಾರೆ. ಈ ಹಾವು ಬಿಲಾಸ್ಪುರದ ಮನೆಯೊಂದರ ಹುಲ್ಲು ಪ್ರದೇಶದಲ್ಲಿ ಅಡಗಿಕೊಂಡಿತ್ತು. ಅಜಿತಾ ಪರಿಣತಿಯಿಂದ ಹಾವನ್ನು ಪೊದೆಯಿಂದ ಹೊರತೆಗೆದು ಚೀಲದಲ್ಲಿ ಹಾಕಿದ್ದಾರೆ. ನಂತರ ಅವರು ಅದನ್ನು ಕಾಡಿನಲ್ಲಿ ಬಿಟ್ಟಿದ್ದಾರೆ.
ಇದನ್ನೂ ಓದಿ:ಗೋಡೆಗೆ ಡಿಕ್ಕಿ ಹೊಡೆದ ಟೆಂಪೋ; ಸಿಕ್ಕಿದ್ದೇ ಛಾನ್ಸು ಎಂದು ಮೀನು ದೋಚಿದ ಜನ-ವಿಡಿಯೊ ಇದೆ
ಇಡೀ ಪ್ರಕ್ರಿಯೆಯ ವಿಡಿಯೊವನ್ನು ಅಜಿತಾ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗಾಗಲೇ 11 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 80,000 ಕ್ಕೂ ಹೆಚ್ಚು ಲೈಕ್ಗಳನ್ನು ಗಳಿಸಿದೆ. ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ, ಅಜಿತಾ ಅತಿ ಹೆಚ್ಚು ಹಾವುಗಳನ್ನು ರಕ್ಷಿಸಿದ ವ್ಯಕ್ತಿ ಎಂಬ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಮಾರ್ಚ್ 2017 ಮತ್ತು ಜುಲೈ 2024 ರ ನಡುವೆ ಅವರು 984 ಹಾವುಗಳನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.