ಹೈದರಾಬಾದ್: ವಿಶ್ವಾದ್ಯಂತ ‘ಪುಷ್ಪ 2’ (Pushpa 2) ಅಬ್ಬರ ಜೋರಾಗಿದೆ. ಬಾಕ್ಸ್ ಆಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್ ಮಾಡುತ್ತಿದೆ. ಈ ಮಧ್ಯೆ ʼಪುಷ್ಪ 2ʼ ನಾಯಕ ಅಲ್ಲು ಅರ್ಜುನ್ (Allu Arjun) ಅವರಿಗೆ ಸಂಕಷ್ಟ ಎದುರಾಗಿದೆ. ಚಿತ್ರದ ಪ್ರೀಮಿಯರ್ ಶೋ ವೇಳೆ ಡಿ. 4ರಂದು ಹೈದರಾಬಾದ್‌ನ ಥಿಯೇಟರ್‌ನಲ್ಲಿ ನಡೆದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಲ್ಲು ಅರ್ಜುನ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ (Allu Arjun Arrest).
ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಅವರನ್ನು ವಶಕ್ಕೆ ಪಡೆದಿದ್ದು, ಸದ್ಯ ಈ ವಿಡಿಯೊ ವೈರಲ್ ಆಗುತ್ತಿದೆ. ಡಿ. 4ರಂದು ಸಂಧ್ಯಾ ಚಿತ್ರಮಂದಿರದಲ್ಲಿ ‘ಪುಷ್ಪ 2’ ಸಿನಿಮಾ ಬಿಡುಗಡೆ ವೇಳೆ ನೂಕುನುಗ್ಗಲು ಉಂಟಾಗಿತ್ತು. ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದರು. ಹೀಗಾಗಿ ಕಾಲ್ತುಳಿತ ಘಟನೆಗೆ ಸಂಬಂಧಿಸಿದಂತೆ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನೂ ಆರೋಪಿ ಎಂದು ಹೆಸರಿಸಲಾಗಿದೆ. ಅಲ್ಲು ಅರ್ಜುನ್ ಈಗಾಗಲೇ ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅರ್ಜಿಯ ವಿಚಾರಣೆ ಇನ್ನೂ ನಡೆದಿಲ್ಲ.
ಮಹಿಳೆಯ ಸಾವಿನ ಬಗ್ಗೆ ಅಲ್ಲು ಅರ್ಜುನ್ ಈಗಾಗಲೇ ಪ್ರತಿಕ್ರಿಯಿಸಿದ್ದು, ಮೃತರ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ಅವರು ನೀಡಿದ್ದರುನೀಡುವುದಾಗಿ ತಿಳಿಸಿದ್ದಾರೆ. ಸಂತ್ರಸ್ತೆಯ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರವನ್ನೂ ಘೋಷಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಕೆಲವು ದಿನಗಲ ಹಿಂದೆ ಮೂವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಸಂಧ್ಯಾ ಥಿಯೇಟರ್(Sandhya Theatre) ಮಾಲೀಕ, ಥಿಯೇಟರ್ ಮ್ಯಾನೇಜರ್ ಹಾಗೂ ಲೋವರ್ ಬಾಲ್ಕನಿ-ಅಪ್ಪರ್ ಬಾಲ್ಕನಿಯ ಮ್ಯಾನೇಜರ್ ಸೇರಿದ್ದಾರೆ. ಬಂಧಿತ ಮೂವರು ಆರೋಪಿಗಳು ಸರಿಯಾದ ಭದ್ರತಾ ಕ್ರಮಗಳ ವಿಷಯದಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಟನನ್ನು ನೋಡಲು ನೂಕು-ನುಗ್ಗಲು
ಸೂಪರ್‌ಸ್ಟಾರ್ ಅಲ್ಲು ಅರ್ಜುನ್ ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದಾಗ ಭಾರೀ ನೂಕು-ನುಗ್ಗಲು ಸಂಭವಿಸಿ ದುರಂತ ನಡೆದಿದೆ. ಈ ವೇಳೆ ಭದ್ರತಾ ತಂಡವು ಎಡವಿದೆ ಎಂದು ಹೇಳಲಾಗಿದೆ. ಚಿಕ್ಕಡಪಲ್ಲಿ ಎಸಿಪಿ ಎಲ್ ರಮೇಶ್ ಕುಮಾರ್ ಪ್ರಕರಣ ಕುರಿತು ಮಾಹಿತಿ ನೀಡಿ, ʼʼತನಿಖೆಯ ಭಾಗವಾಗಿ ಘಟನೆಗೆ ಸಂಬಂಧಿಸಿದ ಮೂವರನ್ನು ನಾವು ಬಂಧಿಸಿದ್ದೇವೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಗಾಯಗೊಂಡ ಮಗು ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದೆʼʼ ಎಂದು ತಿಳಿಸಿದ್ದರು. ಇದೀಗ ಅಲ್ಲು ಅರ್ಜುನ್ ಅವರನ್ನೂ ವಶಕ್ಕೆ ಪಡೆದಿದ್ದು, 105, 118 (5) ಸೆಕ್ಷನ್ ಅಡಿಯಲ್ಲಿ ದೂರು ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Pushpa 2 movie: ಪುಷ್ಪ-2 ಸಿನಿಮಾ ನೋಡುವ ಆತುರ; ರೈಲಿಗೆ ಸಿಲುಕಿ ಅಭಿಮಾನಿ ಸಾವು