Friday, 13th December 2024

Allu Arjun Arrest: ಬಟ್ಟೆ ಬದಲಿಸಲೂ ಬಿಡದೆ ಅಲ್ಲು ಅರ್ಜುನ್‌ನನ್ನು ಎಳೆದೊಯ್ದ ಪೊಲೀಸರು!

Allu Arjun Arrest

ಹೈದರಾಬಾದ್‌: ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ‘ಪುಷ್ಪ 2’ (Pushpa 2) ಚಿತ್ರತಂಡಕ್ಕೆ ಬಹು ದೊಡ್ಡ ಆಘಾತ ಎದುರಾಗಿದೆ. ಸಿನಿಮಾ ನಾಯಕ, ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ (Allu Arjun) ಅವರನ್ನು ಚಿಕ್ಕಡಪಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿ. 4ರಂದು ʼಪುಷ್ಪ 2ʼ ಚಿತ್ರದ ಪ್ರೀಮಿಯರ್‌ ಶೋ ವೇಳೆ ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದ ಅಲ್ಲು ಅರ್ಜುನ್‌ ಅವರನ್ನು ಬಂಧಿಸಲಾಗಿದೆ (Allu Arjun Arrest).

ಮೃತ ಮಹಿಳೆ ರೇವತಿ (30) ಅವರ ಪತಿ ಮಗುಡಪಲ್ಲಿ ಭಾಸ್ಕರ್‌ ಅವರ ದೂರಿನ ಆಧಾರದ ಮೇಲೆ ಸಂಧ್ಯಾ ಥಿಯೇಟರ್‌ನ ಮ್ಯಾನೇಜ್‌ಮೆಂಟ್‌, ನಟ ಅಲ್ಲು ಅರ್ಜುನ್‌ ಮತ್ತು ಅವರ ಆಪ್ತ ಕಾರ್ಯದರ್ಶಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಡಿ. 13ರಂದು ಅಲ್ಲು ಅರ್ಜುನ್‌ ಮನೆಗೆ ಧಾವಿಸಿದ ಪೊಲೀಸರು ಅವರಿಗೆ ಬಟ್ಟೆ ಬದಲಾಯಿಸಲೂ ಅವಕಾಶ ನೀಡದೆ ಠಾಣೆಗೆ ಕರೆದೊಯ್ದಿದ್ದಾರೆ.

ದೂರಿನಲ್ಲಿ ಏನಿದೆ?

ಡಿ. 4ರಂದು ಪತ್ನಿ ರೇವತಿ, ಪುತ್ರ 9 ವರ್ಷದ ತೇಜ್‌ ಮತ್ತು ಪುತ್ರಿ 8 ವರ್ಷದ ಸಾನ್ವಿಕಾ ಅವರೊಂದಿಗೆ ʼಪುಷ್ಪ 2ʼ ಚಿತ್ರವನ್ನು ವೀಕ್ಷಿಸಲು ಚಿಕ್ಕಡಪಲ್ಲಿಯ ಸಂಧ್ಯಾ ಥಿಯೇಟರ್‌ಗೆ ತೆರಳಿದ್ದಾಗಿ ಭಾಸ್ಕರ್‌ ಹೇಳಿದ್ದಾರೆ. ರಾತ್ರಿ ಸುಮಾರು 9.10ರ ವೇಳೆಗೆ ಥಿಯೇಟರ್‌ನಲ್ಲಿ ಜನ ಸಂದಣಿ ಇತ್ತು. 9.40ರ ವೇಳೆಗೆ ನಟ ಅಲ್ಲು ಅರ್ಜುನ್‌ ಥಿಯೇಟರ್‌ಗೆ ಆಗಮಿಸಿದರು. ಈ ವೇಳೆ ಅವರ ಅಂಗ ರಕ್ಷಕರು ಜನ ಸಂದಣಿಯನ್ನು ಸರಿಸಿ ದಾರಿ ಮಾಡಿಕೊಟ್ಟಿದ್ದಾರೆ. ಈ ವೇಳೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಭಾಸ್ಕರ್‌ ವಿವರಿಸಿದ್ದಾರೆ.

ಮುಂದುವರಿದು, ಈ ವೇಳೆ ಕೆಳ ಬಾಲ್ಕನಿಯಲ್ಲಿದ್ದ ಪತ್ನಿ ರೇವತಿ ಮತ್ತು ಪುತ್ರ ತೇಜ್‌ ಅವರಿಗೆ ಉಸಿರು ಕಟ್ಟಿದಂತಾಗಿದ್ದು, ತೀವ್ರ ಅಸ್ವಸ್ಥರಾಗಿ ನೆಲಕ್ಕೆ ಕುಸಿದಿದ್ದಾರೆ. ಕೂಡಲೇ ಪೊಲೀಸರು ಧಾವಿಸಿ ಅವರನ್ನು ಸಮೀಪದ ದುರ್ಗಾ ಬಾಯಿ ದೇಶ್‌ಮುಖ್‌ ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ರೇವತಿ ಮೃತಪಟ್ಟಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ತೇಜ್‌ನನ್ನು ಹೆಚ್ಚಿನ ಚಿಕಿತ್ಸೆಗೆ ಬೇಗುಂಪೇಟೆಯ ಕಿಮ್ಸ್‌ ಆಸ್ಫತ್ರೆಗೆ ಕರೆದೊಯ್ಯಲಾಯಿತು. ಸದ್ಯ ತೇಜ್‌ಗೆ ಚಿಕಿತ್ಸೆ ಮುಂದುವರಿದಿದೆ ಎಂದು ಭಾಸ್ಕರ್‌ ವಿವರಿಸಿದ್ದಾರೆ.

ʼʼಅಲ್ಲು ಅರ್ಜುನ್‌ ಆಗಮಿಸುವ ಮುನ್ನ ಯಾವುದೇ ಸಿದ್ದತೆ ನಡೆಸಿರಲಿಲ್ಲ. ಆಸನಗಳನ್ನು ಖಾಲಿ ಮಾಡುವಾಗ ನಮ್ಮನ್ನು ಕೆಳಕ್ಕೆ ತಳ್ಳಲಾಯಿತು. ಇದು ನನ್ನ ಪತ್ನಿಯ ಸಾವಿಗೆ ಕಾರಣವಾಯಿತು ಮತ್ತು ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಧ್ಯಾ 70 ಎಂಎಂ ಥಿಯೇಟರ್ ಮ್ಯಾನೇಜ್‌ಮೆಂಟ್‌ ಮತ್ತು ಸಿಬ್ಬಂದಿ, ನಟ ಅಲ್ಲು ಅರ್ಜುನ್ ಮತ್ತು ಅವರ ವೈಯಕ್ತಿಕ ಭದ್ರತಾ ಸಿಬ್ಬಂದಿ ಕಾರಣ. ಹೀಗಾಗಿ ಕಾನೂನಿನ ಪ್ರಕಾರ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕುʼʼ ಎಂದು ಮನವಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ಮೇಲೆ ಸೆಕ್ಷನ್ ಬಿಎನ್​ಎಸ್ 118, ಬಿಎನ್​ಎಸ್​ 105 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜತೆಗೆ ಅಲ್ಲು ಅರ್ಜುನ್ ಅನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ. ಇದೀಗ ಅಲ್ಲು ಅರ್ಜುನ್ ಅನ್ನು ಬಂಧಿಸಲಾಗಿದ್ದು, ಪ್ರಾಥಮಿಕ ವಿಚಾರಣೆ ನಡೆಯಲಿದೆ. ಅಲ್ಲು ಅರ್ಜುನ್​ಗೆ ಜಾಮೀನು ಸಿಗುತ್ತೋ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನೂ ಓದಿ: Allu Arjun Arrest: ಕಾಲ್ತುಳಿತ ಪ್ರಕರಣ: ನಟ ಅಲ್ಲು ಅರ್ಜುನ್ ಬಂಧನ