Tuesday, 10th December 2024

Amit Shah: ಇಂದಿರಾ ಗಾಂಧಿ ಪರಲೋಕದಿಂದ ಧರೆಗಿಳಿದು ಬಂದರೂ ಕಾಶ್ಮೀರದಲ್ಲಿ ಆರ್ಟಿಕಲ್ 370 ಮರಳುವುದಿಲ್ಲ; ಅಮಿತ್ ಶಾ ಗುಡುಗು

Amit Shah

ಮುಂಬೈ: ಇಂದಿರಾ ಗಾಂಧಿ (Indira Gandhi)ಯೇ ಸ್ವರ್ಗದಿಂದ ಕೆಳಗಿಳಿದು ಬಂದರೂ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿಯನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಬುಧವಾರ (ನ. 13) ಗುಡುಗಿದ್ದಾರೆ. ಆ ಮೂಲಕ 370ನೇ ವಿಧಿಯನ್ನು ಮರುಸ್ಥಾಪಿಸಬೇಕೆಂದು ಆಗ್ರಹಿಸುತ್ತಿರುವ ವಿಪಕ್ಷಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆದ ಚುನಾವಣಾ ರ‍್ಯಾಲಿಯಲ್ಲಿ ಅವರು ಈ ಘೋಷಣೆ ಹೊರಡಿಸಿದ್ದಾರೆ. 2019ರಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಕಲ್ಪಿಸುವ 370ನೇ ವಿಧಿಯನ್ನು ರದ್ದುಗೊಳಿಸಿತ್ತು ಮತ್ತು ಹಿಂದಿನ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು.

ಅಮಿತ್‌ ಶಾ ಹೇಳಿದ್ದೇನು?

ʼʼತಮ್ಮ 4ನೇ ತಲೆಮಾರು ಬಂದರೂ ದಲಿತರು, ಬುಡಕಟ್ಟು ಜನಾಂಗದವರು ಮತ್ತು ಇತರ ಹಿಂದುಳಿದ ಜಾತಿಗಳಿಗೆ ಇರುವ ಮೀಸಲಾತಿ ಮುಸ್ಲಿಮರಿಗೆ ಸಿಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೆನಪಿನಲ್ಲಿಟ್ಟುಕೊಳ್ಳಬೇಕು” ಎಂದು ಅಮಿತ್ ಶಾ ಹೇಳಿದ್ದಾರೆ. “ಕೆಲವು ದಿನಗಳ ಹಿಂದೆ, ಉಲೇಮಾಗಳು (ಮುಸ್ಲಿಂ ವಿದ್ವಾಂಸರು) ಕಾಂಗ್ರೆಸ್ ಅಧ್ಯಕ್ಷರನ್ನು ಭೇಟಿಯಾಗಿ ಮುಸ್ಲಿಮರಿಗೆ (ಉದ್ಯೋಗ ಮತ್ತು ಶಿಕ್ಷಣದಲ್ಲಿ) ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿದರು. ಮುಸ್ಲಿಮರಿಗೆ ಮೀಸಲಾತಿ ನೀಡಬೇಕಾದರೆ, ಎಸ್‌ಸಿ / ಎಸ್‌ಟಿ / ಒಬಿಸಿಗಳಿಗೆ ಇರುವ ಮೀಸಲಾತಿಯನ್ನು ಕಡಿತಗೊಳಿಸಬೇಕಾಗುತ್ತದೆ. ರಾಹುಲ್ ಬಾಬಾ, ನೀವು ಮಾತ್ರವಲ್ಲ, ನಿಮ್ಮ ನಾಲ್ಕು ತಲೆಮಾರುಗಳು ಬಂದರೂ ಎಸ್‌ಸಿ / ಎಸ್‌ಟಿ / ಒಬಿಸಿಗಳಿಗೆ ಮೀಸಲಾಗಿರುವ ಕೋಟಾವನ್ನು ಕಡಿತಗೊಳಿಸಲು ಮತ್ತು ಮುಸ್ಲಿಮರಿಗೆ ನೀಡಲು ಸಾಧ್ಯವಿಲ್ಲ” ಎಂದು ಅವರು ಸವಾಲು ಹಾಕಿದ್ದಾರೆ.

ಶಿವಸೇನೆ (ಯುಬಿಟಿ), ಎನ್‌ಸಿಪಿ (ಶರದ್‌ ಪವಾರ್‌ ಬಣ) ಮತ್ತು ಕಾಂಗ್ರೆಸ್ ಒಳಗೊಂಡ ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ (MVA) ಮೈತ್ರಿಕೂಟದ ವಿರುದ್ಧವೂ ಅಮಿತ್‌ ಶಾ ಗುಡುಗಿದ್ದಾರೆ. “ಎಂವಿಎ ನಾಯಕರು ರಾಜ್ಯದ ಅಬಿವೃದ್ಧಿಯನ್ನು ಕಡೆಗಣಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ರಚನೆಗೆ ಅವಕಾಶ ನೀಡಿದರೆ ಮೋದಿ ಆಡಳಿತವು ಮಹಾರಾಷ್ಟ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ” ಎಂದು ಅಮಿತ್ ಶಾ ಭರವಸೆ ನೀಡಿದ್ದಾರೆ.

“ರಾಹುಲ್ ಗಾಂಧಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಪ್ರತಿಯನ್ನು ಹಿಡಿದು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಕೆಲವು ದಿನಗಳ ಹಿಂದೆ ಪತ್ರಕರ್ತರು ಆ ಪ್ರತಿಯನ್ನು ಪರಿಶೀಲಿಸಿದಾಗ ಅದರಲ್ಲಿ ಖಾಲಿ ಪುಟಗಳಿದ್ದವು. ನಕಲಿ ಸಂವಿಧಾನದ ಪ್ರತಿಯನ್ನು ಒಯ್ಯುವ ಮೂಲಕ ರಾಹುಲ್ ಜನರ ನಂಬಿಕೆಯನ್ನು ಘಾಸಿಗೊಳಿಸಿದ್ದಾರೆ ಮತ್ತು ಬಾಬಾ ಸಾಹೇಬ್ ಅವರನ್ನು ಅವಮಾನಿಸಿದ್ದಾರೆ. ರಾಹುಲ್, ನೀವು ಸಂವಿಧಾನವನ್ನು ಓದಿಲ್ಲ” ಎಂದು ಶಾ ವಾಗ್ದಾಳಿ ನಡೆಸಿದ್ದಾರೆ. ಜತೆಗೆ ರಾಹುಲ್‌ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರನ್ನೂ ಟೀಕಿಸಿದ್ದಾರೆ.

“ಸೋನಿಯಾ ಗಾಂಧಿ ಅವರು ರಾಹುಲ್ ಬಾಬಾ ಹೆಸರಿನ ವಿಮಾನವನ್ನು ಹಾರಿಸಲು 20 ಬಾರಿ ಪ್ರಯತ್ನಿಸಿ ವಿಫಲರಾಗಿದ್ದಾರೆ. ಈಗ ಮತ್ತೆ ಮಹಾರಾಷ್ಟ್ರದಲ್ಲಿ 21ನೇ ಬಾರಿಗೆ ವಿಮಾನವನ್ನು ಹಾರಿಸುವ ಪ್ರಯತ್ನ ನಡೆಯುತ್ತಿದೆ. ಸೋನಿಯಾ ಜೀ ಈ ಬಾರಿಯೂ ವಿಫಲರಾಗಲಿದ್ದೀರಿʼʼ ಎಂದು ಅಮಿತ್‌ ಶಾ ವ್ಯಂಗ್ಯವಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: JK Special Status: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ; ವಿಧಾನಸಭೆಯಲ್ಲಿ ನಿರ್ಣಯ ಪಾಸ್‌