Saturday, 12th October 2024

ಪಕ್ಷ ಅಧಿಕಾರಕ್ಕೆ ಬಂದರೆ ಅಮರಾವತಿಯೇ ರಾಜಧಾನಿ: ಪವನ್ ಕಲ್ಯಾಣ್

ಮರಾವತಿ: ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ(2024) ಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಮರಾವತಿ ಯನ್ನು ಆಂಧ್ರಪ್ರದೇಶದ ರಾಜಧಾನಿಯಾಗಿ ಉಳಿಸಿಕೊಳ್ಳಲಾಗುವುದು ಎಂದು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಘೋಷಿಸಿದ್ದಾರೆ.

ರಾಜ್ಯದಲ್ಲಿ ವಾರಾಹಿ ಯಾತ್ರೆ ನಡೆಸುತ್ತಿರುವ ಪವನ್ ಕಲ್ಯಾಣ್, ರಾಜಧಾನಿ ಅಮರಾವತಿಗಾಗಿ ತಮ್ಮ ಭೂಮಿಯನ್ನು ಬಿಟ್ಟುಕೊಟ್ಟ ಕನಿಷ್ಠ 185 ರೈತರು ವೈಎಸ್‌ಆರ್‌ಸಿಪಿ ಸರ್ಕಾರದ ನಂತರವೂ ಸಂಕಷ್ಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ.

ರಾಜ್ಯದಲ್ಲಿ ಮೂರು ರಾಜಧಾನಿಗಳನ್ನು ಸ್ಥಾಪಿಸುವ ಸರ್ಕಾರದ ಕ್ರಮಗಳಿಗೆ ಟಕ್ಕರ್ ನೀಡಿದ್ದಾರೆ.

” ಜಗನ್ ಮೋಹನ್ ರೆಡ್ಡಿ ಅವರು ವಿರೋಧ ಪಕ್ಷದಲ್ಲಿದ್ದಾಗ ಈ ವಿಷಯದ ಬಗ್ಗೆ ಏಕೆ ಮೌನವಾಗಿದ್ದರು..? ಅವರು ಅಮರಾವತಿಗೆ ಇನ್ನೂ 5,000 ಎಕರೆಗಳನ್ನು ಬಯಸಿ ಅಧಿಕಾರಕ್ಕೆ ಬಂದ ನಂತರ ಈ ವಿಷಯದಲ್ಲಿ ತಮ್ಮ ನಿಲುವನ್ನು ಬದಲಾಯಿಸಿದರು” ಎಂದು ಜನ ಸೇನಾ ಪಕ್ಷದ ಅಧ್ಯಕ್ಷ ಆರೋಪಿಸಿದ್ದಾರೆ.

ಸೈಬರಾಬಾದ್‌ನಲ್ಲಿ ನಡೆದಂತೆ ರಾಜ್ಯದ ಪ್ರತಿಯೊಂದು ಪ್ರದೇಶದ ಜನರನ್ನು ಅಮರಾವತಿಗೆ ಆಕರ್ಷಿಸುವ ನೀತಿಯನ್ನು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತರಬೇಕಿತ್ತು. ಬದಲಿಗೆ ಮುಖ್ಯಮಂತ್ರಿ ಮೂರು ರಾಜಧಾನಿಗಳ ನಾಟಕ ಆಡುತ್ತಿದ್ದಾರೆ ಎಂದು ಜಗನ್ ವಿರುದ್ದ ಕಿಡಿಕಾರಿದ್ದಾರೆ.

ದಲಿತರ ಕಲ್ಯಾಣದ ಬಗ್ಗೆ ಪ್ರಸ್ತಾಪಿಸಿದ ಪವನ್ ಕಲ್ಯಾಣ್, ಜಗನ್ ಮೋಹನ್ ರೆಡ್ಡಿ ಅವರು ದಲಿತರಿಗಾಗಿ 18 ಕಲ್ಯಾಣ ಯೋಜನೆಗಳನ್ನು ರದ್ದುಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.

“ಚುನಾವಣೆಯು ನವೆಂಬರ್ ಅಥವಾ ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆಯಿದೆ. ಯುವಕರು ಪ್ರಜ್ಞಾವಂತಿಕೆಯಿಂದ ಮತದಾನ ಮಾಡಬೇಕು. ಕಾಪು ಸಮುದಾಯಕ್ಕೆ ಮೀಸಲಾತಿ ನಿರಾಕರಿಸಿದ ಮುಖ್ಯಮಂತ್ರಿಯ ಪರವಾಗಿ ಮತ ಹಾಕಬೇಕೇ ಎಂಬುದನ್ನು ನಿರ್ಧರಿಸಬೇಕು” ಎಂದಿದ್ದಾರೆ.