Saturday, 12th October 2024

ಸೇನಾ ಸಿಬ್ಬಂದಿ ಮೇಲೆ ಗ್ರೆನೇಡ್ ಎಸೆತ, ಸೇನಾಧಿಕಾರಿಗಳಿಗೆ ಗಾಯ

ಅನಂತ್‌ನಾಗ್:‌ ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವ ಸೇನಾ ಸಿಬ್ಬಂದಿಯ ಮೇಲೆ ಭಯೋತ್ಪಾದಕರು ಗ್ರೆನೇಡ್ ಎಸೆದು, ಗುಂಡಿನ ದಾಳಿ ನಡೆಸಿದ್ದಾರೆ.

ದಾಳಿಯಲ್ಲಿ ಮೂವರು ಸೇನಾಧಿಕಾರಿಗಳು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ. ದಾಳಿಯ ನಂತರ ಸಮೀಪದಲ್ಲಿರುವ ಶ್ರೀನಗರ ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನ ಬಂದ್‌ ಮಾಡಲಾಗಿದೆ.

ಗಸ್ತು ತಿರುಗುವ ಸೇನಾ ಸಿಬ್ಬಂದಿಗಳನ್ನ ಗುರಿಯಾಗಿಸಿ ಭಯೋತ್ಪಾದಕರು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಳಿಯ ಶಾಲಾ ಕಟ್ಟಡದಲ್ಲಿ ಐಇಡಿ ನೆಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಸಿಬ್ಬಂದಿ ಶಾಲೆಯ ಹತ್ತಿರ ಬಂದಾಗ, ಉಗ್ರರು ಐಇಡಿ ಆನ್ ಮಾಡಿ ಸೇನಾ ಸಿಬ್ಬಂದಿಯ ಮೇಲೆ ಗುಂಡು ಹಾರಿಸಿದರು ಎಂದು ಮೂಲಗಳು ತಿಳಿಸಿವೆ.