Friday, 20th September 2024

ಬೇಹುಗಾರಿಕೆ: ಭರೂಚ್‌ ಜಿಲ್ಲೆಯಲ್ಲಿ ವ್ಯಕ್ತಿಯ ಬಂಧನ

ರೂಚ್‌: ಪಾಕಿಸ್ತಾನದ ಗುಪ್ತಚರ ಸಂಸ್ಥೆಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಗುಜರಾತ್‌ನ ಭರೂಚ್‌ ಜಿಲ್ಲೆಯಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯನ್ನು ಪ್ರವೀಣ್‌ ಮಿಶ್ರಾ ಎಂದು ಗುರುತಿಸಲಾಗಿದೆ.

ಈತ ಭಾರತೀಯ ಸಶಸ್ತ್ರ ಪಡೆಗಳು ಮತ್ತು ರಕ್ಷಣೆಗೆ ಸಂಬಂಧಿಸಿದ ಆರ್‌ ಡಿ ಸಂಸ್ಥೆಗಳ ಬಗ್ಗೆ ಅತ್ಯಂತ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಿದ್ದ ಎಂದು ಗುಜರಾತ್‌ ಅಪರಾಧ ತನಿಖಾ ಇಲಾಖೆ (ಸಿಐಡಿ) ತಿಳಿಸಿದೆ. ಉಧಂಪುರದ ಮಿಲಿಟರಿ ಗುಪ್ತಚರ ದಳದಿಂದ ಬಂದ ಸುಳಿವಿನ ಮೇರೆಗೆ ಸಿಐಡಿ ತನ್ನ ತನಿಖೆ ಆರಂಭಿಸಿ ಆರೋಪಿಯನ್ನು ಬಂಧಿಸಿದೆ.

ಭರೂಚ್‌ ಜಿಲ್ಲೆಯ ಅಂಕಲೇಶ್ವರ ನಿವಾಸಿ ಮತ್ತು ಬಿಹಾರದ ಮುಜಾಫರ್‌ಪುರದ ನಿವಾಸಿಯಾಗಿರುವ ಮಿಶ್ರಾ ಅವರು ಗಂಭೀರ ಭದ್ರತಾ ಪರಿಣಾಮ ಗಳನ್ನು ಉಂಟುಮಾಡುವ ದೇಶದ ವಿರುದ್ಧ ಕ್ರಿಮಿನಲ್‌ ಪಿತೂರಿ ನಡೆಸಲು ವಾಟ್ಸಾಪ್‌ ಕರೆಗಳು ಮತ್ತು ಆಡಿಯೊ ಚಾಟ್‌ ಮೂಲಕ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರೊಂದಿಗೆ ಸಂಪರ್ಕದಲ್ಲಿದ್ದರು ಎಂದು ಸಿಐಡಿ ಹೇಳಿದೆ. ಪಾಕಿಸ್ತಾನದಲ್ಲಿರುವ ಗುಪ್ತಚರ ಸಂಸ್ಥೆಗೆ ಮಾಹಿತಿ ರವಾನಿಸುತ್ತಿರುವುದು ಪತ್ತೆಯಾಗಿದೆ ಎಂದು ಸಿಐಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಭಾರತೀಯ ವಾಟ್ಸಾಪ್‌ ಸಂಖ್ಯೆ ಮತ್ತು ಸೋನಲ್‌ ಗಾರ್ಗ್‌ನ ನಕಲಿ ಫೇಸ್‌‍ಬುಕ್‌ ಐಡಿ ಬಳಸಿದ ಮಿಶ್ರಾ ಮತ್ತು ಪಾಕಿಸ್ತಾನಿ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದೆ.