Friday, 13th December 2024

ಕೆಲವೊಮ್ಮೆ ಸೋಲುವುದಕ್ಕಾಗಿಯೇ ಹೋರಾಡಬೇಕಾಗುತ್ತದೆ: ಕಪಿಲ್ ಸಿಬಲ್

ವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ಬೆನ್ನಲ್ಲೇ ಹಿರಿಯ ವಕೀಲರಾದ ಕಪಿಲ್ ಸಿಬಲ್ ಪ್ರತಿಕ್ರಿಯಿಸಿದ್ದು, ‘ಕೆಲವು ಯುದ್ಧಗಳಲ್ಲಿ ಸೋಲುವು ದಕ್ಕಾಗಿಯೇ ಹೋರಾಡಬೇಕಾಗುತ್ತದೆ’ ಎಂದಿದ್ದಾರೆ.

‘ಕೆಲವು ಯುದ್ಧಗಳಲ್ಲಿ ಸೋಲುವುದಕ್ಕಾಯೇ ಹೋರಾಡಬೇಕಾಗುತ್ತದೆ. ಮುಂದಿನ ತಲೆಮಾರುಗಳು ತಿಳಿದುಕೊಳ್ಳುವುದಕ್ಕಾಗಿ ಅಹಿತಕರ ಸಂಗತಿಗಳನ್ನು ಇತಿಹಾಸದಲ್ಲಿ ದಾಖಲಿಸಬೇಕು. ಸರಿ ಮತ್ತು ತಪ್ಪುಗಳೆಂಬ ಸಾಂಸ್ಥಿಕ ಕ್ರಮಗಳ ಕುರಿತು ಮುಂಬರುವ ವರ್ಷಗಳಲ್ಲಿ ಚರ್ಚಿಸಲಾಗುವುದು. ಇತಿಹಾಸ ಮಾತ್ರವೇ ಐತಿಹಾಸಿಕ ನಿರ್ಧಾರಗಳ ನೈತಿಕ ದಿಕ್ಸೂಚಿಯ ಅಂತಿಮ ತೀರ್ಪುಗಾರ’ ಎಂದು ಬರೆದುಕೊಂಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮರುಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುವುದು. ಹಾಗೆಯೇ, ವಿಧಾನಸಭೆಗೆ 2024ರ ಸೆಪ್ಟೆಂಬರ್‌ 30ರ ಒಳಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗುವುದು’ ಎಂದು ತೀರ್ಪು ಪ್ರಕಟಿಸುವ ವೇಳೆ ಸಿಜೆಐ ಹೇಳಿದ್ದಾರೆ.

ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು, 2019ರ ಆಗಸ್ಟ್‌ 5ರಂದು ರದ್ದುಪಡಿಸಿದೆ. ಹಾಗೆಯೇ, ರಾಜ್ಯವನ್ನು ‘ಜಮ್ಮು ಮತ್ತು ಕಾಶ್ಮೀರ’ ಹಾಗೂ ‘ಲಡಾಖ್‌’ ಎಂದು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ.