Monday, 14th October 2024

Arvind Kejriwal: ಶೀಘ್ರವೇ ಕೇಜ್ರಿವಾಲ್‌ಗೆ ಸರ್ಕಾರಿ ಬಂಗಲೆ ನೀಡಿ- ಕೇಂದ್ರಕ್ಕೆ ಆಪ್‌ ಡಿಮ್ಯಾಂಡ್‌

Arvind Kejriwal

ನವದೆಹಲಿ: ದೆಹಲಿ ನಿರ್ಗಮಿತ ಸಿಎಂ ಅರವಿಂದ ಕೇಜ್ರಿವಾಲ್‌(Arvind Kejriwal) ಅವರಿಗೆ ಸರ್ಕಾರಿ ನಿವಾಸ ನೀಡಬೇಕೆಂದು ಆಮ್‌ ಆದ್ಮಿ ಪಕ್ಷ(Aam Aadmi Party) ಡಿಮ್ಯಾಂಡ್‌ ಮಾಡಿದೆ. ಕೇಜ್ರಿವಾಲ್‌ ರಾಷ್ಟ್ರೀಯ ಪಕ್ಷವೊಂದರ ಅಧ್ಯಕ್ಷನಾಗಿದ್ದು, ಅವರಿಗೆ ಸರ್ಕಾರಿ ನಿವಾಸ ಪೂರೈಸಲೇಬೇಕು ಎಂದು ಕೇಂದ್ರಕ್ಕೆ ಬೇಡಿಕೆ ಇಟ್ಟಿದೆ.

ಈ ಕುರಿತು ದಿಲ್ಲಿ ಆಪ್‌ ಸಂಸದ ರಾಘವ್‌ ಚಡ್ಡಾ ಪ್ರತಿಕ್ರಿಯಿಸಿದ್ದು, ಕೇಜ್ರಿವಾಲ್‌ ಸರ್ಕಾರಿ ನಿವಾಸ ಪಡೆಯಲು ಅರ್ಹರು. ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಅಡಿಯಲ್ಲಿರುವ ಎಸ್ಟೇಟ್‌ ನಿರ್ದೇಶಕರಿಗೆ ನಮ್ಮ ಪಕ್ಷ ರಾಷ್ಟ್ರೀಯ ಕಾರ್ಯದರ್ಶಿ ಪಂಕಜ್‌ ಗುಪ್ತಾ ಪತ್ರ ಬರೆದಿದ್ದು, ಕೇಜ್ರಿವಾಲ್‌ ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಸರ್ಕಾರಿ ನಿವಾಸದ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದ್ಧಾರೆ.

ಕೇಜ್ರಿವಾಲ್‌ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಫ್ಲಾಗ್ ಸ್ಟಾಫ್ ರಸ್ತೆಯಲ್ಲಿರುವ ತಮ್ಮ ಪ್ರಸ್ತುತ ನಿವಾಸಕ್ಕೆ ತೆರಳಿದರು ಮತ್ತು ಅವರು 2015ರಿಂದಲೂ ಅಂದಿನಿಂದ ಅಲ್ಲಿಯೇ ವಾಸವಾಗಿದ್ದಾರೆ.

“ಎಎಪಿ ದೇಶದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ರಾಜಕೀಯ ಪಕ್ಷ. ಕಾನೂನಿನ ಪ್ರಕಾರ, ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ ನಿವಾಸವನ್ನು ನೀಡಬೇಕು. ಕೇಜ್ರಿವಾಲ್‌ಗೆ ವಸತಿ ಸೌಕರ್ಯವನ್ನು ನೀಡುವಂತೆ ನಾವು ಸರ್ಕಾರವನ್ನು ಕೋರುತ್ತೇವೆ. ಸಂಸದ ಹಾಗೂ ಕಾರ್ಯಕರ್ತನಾಗಿ ಇದು ನನ್ನ ವೈಯಕ್ತಿಕ ಮನವಿ. ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಸಂದರ್ಶಕರನ್ನು ಭೇಟಿ ಮಾಡಲು ಅನುಕೂಲವಾಗುವಂತೆ ಕಾನೂನಿನಲ್ಲಿ ಇದಕ್ಕೆ ಅವಕಾಶ ಕಲ್ಪಿಸಲಾಗಿದೆ,” ಎಂದು ಚಡ್ಡಾ ಹೇಳಿದರು.

ದೆಹಲಿಯಲ್ಲಿ ಆರು ರಾಷ್ಟ್ರೀಯ ರಾಜಕೀಯ ಪಕ್ಷಗಳಿವೆ. ಬಿಜೆಪಿ, ಕಾಂಗ್ರೆಸ್‌, ಬಿಎಸ್‌ಪಿ, ಸಿಎಂಪಿ ಅಧ್ಯಕ್ಷರಿಗೆ ಸರ್ಕಾರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ದೇಶದ ಆರನೇ ರಾಷ್ಟ್ರೀಯ ಪಕ್ಷವಾಗಿರುವ ಎಎಪಿಗು ಕೂಡ ಆದಷ್ಟು ಬೇಗ ಸರ್ಕಾರಿ ವಸತಿಯನ್ನು ನೀಡಬೇಕು” ಎಂದು ಚಾಡಾ ಹೇಳಿದರು.

ನಿಯಮ ಹೇಳೋದೇನು?

ಕಾನೂನಿನ ಪ್ರಕಾರ ಯಾವುದೇ ರಾಷ್ಟ್ರೀಯ ಪಕ್ಷಗಳ ಅಧ್ಯಕ್ಷರು ದೆಹಲಿಯಲ್ಲಿ ಸ್ವಂತ ನಿವಾಸ ಹೊಂದಿಲ್ಲದೇ ಇದ್ದಲ್ಲಿ ಅವರಿಗೆ ಕೇಂದ್ರ ಸರ್ಕಾರ ವಸತಿ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ. ಅರವಿಂದ್ ಕೇಜ್ರಿವಾಲ್ ಅವರು ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷವಾದ AAP ನ ಅಧ್ಯಕ್ಷರಾಗಿ ಕೇಂದ್ರ ದೆಹಲಿಯಲ್ಲಿ ವಸತಿ ಪಡೆಯಲು ಅರ್ಹರಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Arvind Kejriwal: ಸಿಎಂ ಸ್ಥಾನದಿಂದ ಕೆಳಗಿಳಿದ ಕೇಜ್ರಿವಾಲ್‌; ಲೆಫ್ಟಿನೆಂಟ್‌ ಗವರ್ನರ್‌ಗೆ ರಾಜೀನಾಮೆ ಸಲ್ಲಿಕೆ