Wednesday, 11th December 2024

10 ದಿನಗಳ ಕಾಲ ಇಡಿ ಕಸ್ಟಡಿಗೆ ಕೇಜ್ರಿವಾಲ್

ವದೆಹಲಿ : ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿ ಇಡಿಯಿಂದ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಶುಕ್ರವಾರ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕೋರ್ಟ್ ಅವರನ್ನು 10 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡಿದೆ..

ಮದ್ಯ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ 10 ದಿನಗಳ ಕಾಲ ಇಡಿ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿತ್ತು.

ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು 10 ದಿನಗಳ ಕಾಲ ಇಡಿ ಕಸ್ಟಡಿಗೆ ಕೋರಿದರು. “ನಾವು ಪಿಎಂಎಲ್‌ಎ (ಅಥವಾ ಮನಿ ಲಾಂಡರಿಂಗ್ ತಡೆ ಕಾಯ್ದೆ) ಸೆಕ್ಷನ್ 19 ಅನ್ನು ಅನುಸರಿಸಿದ್ದೇವೆ. ಸಂಬಂಧಿಕರಿಗೆ ಮಾಹಿತಿ ನೀಡಲಾಗುತ್ತದೆ ಮತ್ತು ರಿಮಾಂಡ್ ಅರ್ಜಿಯ ಪ್ರತಿಯನ್ನ ನೀಡಲಾಗುತ್ತದೆ. ಬಂಧನದ ಕಾರಣಗಳನ್ನ ಲಿಖಿತವಾಗಿ ಒದಗಿಸಲಾಗಿದೆ” ಎಂದು ಹೇಳಿದರು.

ಕೇಜ್ರಿವಾಲ್ ಅವರು ಹಗರಣದ ಕಿಂಗ್ ಪಿನ್ ಎಂದು ರಾಜು ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ. “ಅವರು ನೀತಿಯ ಅನುಷ್ಠಾನದಲ್ಲಿ ನೇರವಾಗಿ ಭಾಗಿ ಯಾಗಿದ್ದರು ಮತ್ತು ದಕ್ಷಿಣ ಗುಂಪಿಗೆ ಅನುಕೂಲ ಮಾಡಿಕೊಟ್ಟರು” ಎಂದಿದ್ದಾರೆ.

ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದು ಪಕ್ಷ ಹೇಳಿದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಈವರೆಗೆ ಒಟ್ಟು ಆರು ಚಾರ್ಜ್ಶೀಟ್ಗಳನ್ನು ಸಲ್ಲಿಸಿದೆ ಮತ್ತು 128 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನ ಮುಟ್ಟುಗೋಲು ಹಾಕಿಕೊಂಡಿದೆ.