Saturday, 14th December 2024

Ashok Tanwar: 1.45ರವರಗೆ ಬಿಜೆಪಿ, 2.45ರ ವೇಳೆಗೆ ಕಾಂಗ್ರೆಸ್‌; ಇದು ಅಶೋಕ್‌ ತನ್ವರ್‌ನ ಕುತೂಹಲಕಾರಿ ಪಕ್ಷಾಂತರದ ಕಥೆ

ಚಂಡೀಗಢ: ಅಕ್ಟೋಬರ್‌ 5ರಂದು ಹರಿಯಾಣ ವಿಧಾನಸಭಾ ಚುನಾವಣೆ (Haryana Assembly Elections 2024) ನಡೆಯಲಿದ್ದು, ರಾಜಕೀಯ ಚಟುವಟಿಕೆ ಗರಿಗೆದರಿದೆ. ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ಜನವರಿಯಲ್ಲಿ ಬಿಜೆಪಿ ಸೇರಿದ್ದ ಮಾಜಿ ಸಂಸದ ಅಶೋಕ್‌ ತನ್ವರ್‌ (Ashok Tanwar) ಗುರುವಾರ (ಅಕ್ಟೋಬರ್‌ 3) ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. ಅಚ್ಚರಿ ಎಂದರೆ 1.45ರವರಗೆ ಬಿಜೆಪಿಯಲ್ಲಿದ್ದ ಅವರು 2.45ರ ವೇಳೆಗೆ ಕಾಂಗ್ರೆಸ್‌ನಲ್ಲಿದ್ದರು.

ಈ ವರ್ಷದ ಆರಂಭದಲ್ಲಿ ಅಶೋಕ್‌ ತನ್ವರ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದರು. ಇಂದು ಹರಿಯಾಣದ ಮಹೇಂದ್ರಗಢದಲ್ಲಿ ಆಯೋಜಿಸಿದ್ದ ಕಾಂಗ್ರೆಸ್‌ ರ‍್ಯಾಲಿಯಲ್ಲಿ ಅವರು ರಾಹುಲ್‌ ಗಾಂಧಿ ಸಮ್ಮುಖದಲ್ಲಿ ಘರ್‌ ವಾಪಸಿ ಆಗಿದ್ದಾರೆ.

ಯಾರು ಈ ಅಶೋಕ್‌ ತನ್ವರ್‌?

ಸಿರ್ಸಾದ ಮಾಜಿ ಸಂಸದ ಅಶೋಕ್‌ ತನ್ವರ್‌ ಅವರು 2014ರಿಂದ 2019ರವರೆಗೆ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿದ್ದರು. ಬಳಿಕ ಪಕ್ಷ ತೊರೆದು 2021ರಲ್ಲಿ ತೃಣಮೂಲ ಕಾಂಗ್ರೆಸ್‌ ಸೇರ್ಪಡೆಯಾಗಿದರು. ಮರುವರ್ಷ ಆಮ್‌ ಆದ್ಮಿ ಪಾರ್ಟಿ(AAP)ಗೆ ಹಾರಿದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಮ್‌ ಆದ್ಮಿ ಪಾರ್ಟಿಯ ಅರವಿಂದ್‌ ಕೇಜ್ರಿವಾಲ್‌ ಅವರ ನಿರ್ಧಾರವನ್ನು ಖಂಡಿಸಿ ಆಪ್‌ನಿಂದಲೂ ಹೊರ ಬಂದರು. ಬಳಿಕ ಅವರು ಕೇಸರಿ ಪಾಳಯದಲ್ಲಿ ಗುರುತಿಸಿಕೊಂಡಿದ್ದರು. ಬಿಜೆಪಿ ಸಿರ್ಸಾದಿಂದ ಅವರಿಗೆ ಟಿಕೆಟ್‌ ನೀಡಿತ್ತು. ಆದರೆ ಕಾಂಗ್ರೆಸ್‌ನ ಕುಮಾರಿ ಸೆಲ್ಜಾ ವಿರುದ್ದ ಸೋಲುಂಡಿದ್ದರು.

ಅಶೋಕ್‌ ಕಾಂಗ್ರೆಸ್‌ಗೆ ಮರಳಿರುವುದನ್ನು ಪಕ್ಷ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಕಟಿಸಿದೆ. “ಕಾಂಗ್ರೆಸ್ ಯಾವಾಗಲೂ ಸಮಾಜದಲ್ಲಿನ ತುಳಿತಕ್ಕೊಳಗಾದ ಮತ್ತು ವಂಚಿತ ವರ್ಗಗಳ ಪರವಾಗಿ ಧ್ವನಿ ಎತ್ತಿದೆ. ನಮ್ಮ ಹೋರಾಟ ಮತ್ತು ಸಮರ್ಪಣೆಯಿಂದ ಪ್ರಭಾವಿತರಾದ ಹಿರಿಯ ಬಿಜೆಪಿ ನಾಯಕ, ಮಾಜಿ ಸಂಸದ, ಬಿಜೆಪಿಯ ಪ್ರಚಾರ ಸಮಿತಿಯ ಸದಸ್ಯ ಮತ್ತು ಸ್ಟಾರ್ ಪ್ರಚಾರಕ ಅಶೋಕ್ ತನ್ವರ್ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ” ಎಂದು ತಿಳಿಸಿದೆ.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಿಂದ ಎಂಫಿಲ್ ಮತ್ತು ಪಿಎಚ್‌ಡಿ ಪಡೆದಿರುವ ತನ್ವರ್ ಕಾಂಗ್ರಸ್‌ನ ವಿದ್ಯಾರ್ಥಿ ಘಟಕ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (National Students Union of India)ದೊಂದಿಗೆ ತಮ್ಮ ರಾಜಕೀಯ ಜೀವನ ಪ್ರಾರಂಭಿಸಿದರು. ಅವರು ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷರಾಗಿದ್ದರು ಮತ್ತು ಕಾಂಗ್ರೆಸ್‌ನ ಯುವ ವಿಭಾಗವಾದ ಇಂಡಿಯನ್‌ ಯೂತ್‌ ಕಾಂಗ್ರೆಸ್‌ (Indian Youth Congress)ನ ಮುಖ್ಯಸ್ಥರಾಗಿದ್ದರು.

ಈ ಸುದ್ದಿಯನ್ನೂ ಓದಿ: Savitri Jindal: ಹರಿಯಾಣ ವಿಧಾನಸಭಾ ಚುನಾವಣೆ; ʼಟಾರ್ಚ್‌ʼ ಹಿಡಿದು ಕಣಕ್ಕಿಳಿದ ದೇಶದ ಶ್ರೀಮಂತ ಮಹಿಳೆ ಸಾವಿತ್ರಿ ಜಿಂದಾಲ್‌

ಕುತೂಹಲಕಾರಿ ಸಂಗತಿಯೆಂದರೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ತನ್ವರ್ ಇಂದು ಬೆಳಿಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಅದಾಗಿ 1 ಗಂಟೆಯ ನಂತರ ಅವರು ರಾಹುಲ್ ಗಾಂಧಿ ಅವರೊಂದಿಗೆ ಕಾಂಗ್ರೆಸ್ ರ‍್ಯಾಲಿಯಲ್ಲಿ ಕಾಣಿಸಿಕೊಂಡರು. ಈ ವೇಳೆ ತಮ್ಮ ʼಘರ್ ವಾಪಸಿʼಯನ್ನು ಘೋಷಿಸಿದರು. 90 ಕ್ಷೇತ್ರಗಳ ಹರಿಯಾಣ ವಿಧಾನಭೆಗೆ ಅಕ್ಟೋಬರ್‌ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್‌ 8ರಂದು ಫಲಿತಾಂಶ ಘೋಷಣೆಯಾಗಲಿದೆ.