Friday, 13th December 2024

Assembly Election result: ನಾಳೆ ಹರಿಯಾಣ, ಕಾಶ್ಮೀರ ಎಲೆಕ್ಷನ್‌ ರಿಸಲ್ಟ್‌! ಸಮೀಕ್ಷೆಗಳ ಭವಿಷ್ಯ ನಿಜವಾಗುತ್ತಾ?

election result

ನವದೆಹಲಿ: ಬಹು ನಿರೀಕ್ಷಿತ ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯ ಫಲಿತಾಂಶ(Assembly Election result) ನಾಳೆ ಹೊರ ಬೀಳಲಿದ್ದು, ಬೆಳಗ್ಗೆ 8ಗಂಟೆಯಿಂದಲೇ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಚುನಾವಣಾ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಬೆಳಗ್ಗೆಯೇ ಮತ ಎಣಿಕೆ ಕೇಂದ್ರಗಳಿಗೆ ಆಗಮಿಸಲಿದ್ದು, ಬೆಳಗ್ಗೆ 5 ಗಂಟೆಗೆ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ. ಬೆಳಿಗ್ಗೆ 6 ಗಂಟೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು ಮತ್ತು ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ.

ಹರಿಯಾಣದಲ್ಲಿ ಒಟ್ಟು 90 ಕ್ಷೇತ್ರಗಳಲ್ಲಿ1,031 ಅಭ್ಯರ್ಥಿಗಳ ಕಣದಲ್ಲಿದ್ದಾರೆ. ಇನ್ನು ಬರೋಬ್ಬರಿ ಹತ್ತು ವರ್ಷಗಳ ನಂತರ ಚುನಾವಣೆ ಎದುರಿಸುತ್ತಿರುವ ಜಮ್ಮು-ಕಾಶ್ಮೀರದಲ್ಲಿ ಈ ಬಾರಿ ತ್ರಿಕೋಣ ಸ್ಪರ್ಧೆ ಇದೆ. ಹೀಗಾಗಿ ನಾಳೆ ಪ್ರಕಟವಾಗುವ ಫಲಿತಾಂಶದಲ್ಲಿ ಎಲ್ಲಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಆರಂಭಿಕ ಹಂತದ ಎಣಿಕೆಯು ಅಂಚೆ ಮತಪತ್ರಗಳ ಮೇಲೆ ಕೇಂದ್ರೀಕರಿಸುತ್ತದೆ, ಇದರಲ್ಲಿ ವಿಶೇಷಚೇತನ ನಾಗರಿಕರು, ಭದ್ರತಾ ಸಿಬ್ಬಂದಿ ಮತ್ತು ಅಗತ್ಯ ಸೇವೆಗಳಲ್ಲಿ ತೊಡಗಿರುವ ಸರ್ಕಾರಿ ನೌಕರರು ಚಲಾಯಿಸಿದ ಮತಗಳು ಸೇರಿವೆ. ಮಧ್ಯಾಹ್ನದ ವೇಳೆಗೆ ಮೊದಲ ಹಂತದ ಮತಎಣಿಕೆ ಪೂರ್ಣಗೊಳ್ಳಲಿದೆ.

ಫಲಿತಾಂಶ ನೋಡುವುದು ಹೇಗೆ?

ಅಧಿಕೃತ ಚುನಾವಣಾ ಫಲಿತಾಂಶಗಳನ್ನು ಭಾರತೀಯ ಚುನಾವಣಾ ಆಯೋಗದ ವೆಬ್‌ಸೈಟ್ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್‌ನಲ್ಲಿ ಲಭ್ಯವಿರಲಿದೆ.

ಸಮೀಕ್ಷೆಗಳು ಹೇಳೋದೇನು?

ಜಮ್ಮು-ಕಾಶ್ಮೀರ ಮತ್ತು ಹರಿಯಾಣ ಚುನಾವಣೋತ್ತರ ಸಮೀಕ್ಷೆಗಳು ಎರಡು ದಿನಗಳ ಹಿಂದೆ ಹೊರಬಿದ್ದಿದೆ. ಕಣಿವೆ ರಾಜ್ಯದ ಜಮ್ಮು ಕಾಶ್ಮೀರದಲ್ಲಿ ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದಿಲ್ಲದಿದ್ದರೂ, ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ ಎಂದು ಸಮೀಕ್ಷೆಗಳು ಹೇಳಿವೆ. ಮತ್ತೊಂದು ಹರಿಯಾಣದಲ್ಲಿ ಬಿಜೆಪಿಯ ಹ್ಯಾಟ್ರಿಕ್‌ ಗೆಲವಿನ ಕನಸು ನುಚ್ಚುನೂರಾಗಲಿದ್ದು, ಕಾಂಗ್ರೆಸ್‌ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಎಕ್ಸಿಟ್‌ ಪೋಲ್‌ ಭವಿಷ್ಯ ನುಡಿದಿದೆ.

ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ತಿರಸ್ಕರಿಸಿರುವ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಬಿಜೆಪಿ ಪೂರ್ಣ ಬಹುಮತದೊಂದಿಗೆ ಮೂರನೇ ಬಾರಿಗೆ ಸರ್ಕಾರ ರಚಿಸುತ್ತದೆ ಮತ್ತು ಬಿಜೆಪಿಯ ಪ್ರಚಂಡ ಗೆಲುವಿನ ನಂತರ ಕಾಂಗ್ರೆಸ್ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು (ಇವಿಎಂ) ದೂಷಿಸುತ್ತದೆ ಎಂದು ಹೇಳಿದ್ದಾರೆ.

ಆರ್ಟಿಕಲ್ 370 ರದ್ದತಿ ನಂತರ ಕೇಂದ್ರಾಡಳಿತ ಪ್ರದೇಶವಾಗಿ ಮಾಡಲ್ಪಟ್ಟ ಜಮ್ಮು ಕಾಶ್ಮೀರದಲ್ಲಿ, 10 ವರ್ಷಗಳ ಅಂತರದ ನಂತರ ವಿಧಾನಸಭೆ ಚುನಾವಣೆಗಳು ನಡೆದಿವೆ. ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟವು ಏಕೈಕ ಅತಿ ದೊಡ್ಡ ಚುನಾವಣಾ ಪೂರ್ವ ಮೈತ್ರಿಯಾಗಿ ಹೊರಹೊಮ್ಮಲಿದೆ ಎಂದು ಊಹಿಸಲಾಗಿದೆಯಾದರೂ, ಸ್ಪಷ್ಟ ಬಹುಮತ ಯಾವ ಪಕ್ಷಕ್ಕೂ ಸಿಕ್ಕಿಲ್ಲ.

ಇನ್ನು ಈ ಬಾರಿ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ ಎಂಬುದು ಎಕ್ಸಿಟ್‌ ಪೋಲ್‌ನಲ್ಲಿ ಬಯಲಾಗುತ್ತಿದ್ದಂತೆ ಕಾಂಗ್ರೆಸ್‌-ಎನ್‌ ಸಿ ಮೈತ್ರಿ ಇದೀಗ ಪಿಡಿಪಿಯತ್ತ ಮುಖಮಾಡಿದೆ. ಸಂಭಾವ್ಯ ಮೈತ್ರಿಗಳ ಕುರಿತು ಮಾತನಾಡಿದ ಫಾರೂಕ್‌ ಅಬ್ದುಲ್ಲಾ, ಎನ್‌ಸಿ-ಕಾಂಗ್ರೆಸ್ ಮೈತ್ರಿಯು ಈ ಪ್ರದೇಶದಲ್ಲಿ ನಿರುದ್ಯೋಗ ಮತ್ತು ಪತ್ರಿಕಾ ಸ್ವಾತಂತ್ರ್ಯದಂತಹ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ಪಿಡಿಪಿಯಿಂದ ಬೆಂಬಲವನ್ನು ಅಪೇಕ್ಷಿಸುತ್ತದೆ. ನಾವೆಲ್ಲರೂ ಒಂದೇ ವಿಷಯಕ್ಕಾಗಿ ಕೆಲಸ ಮಾಡಿದರೆ, ರಾಜ್ಯದ ಜನರ ಪರಿಸ್ಥಿತಿ ಸುಧಾರಣೆಗಾಗಿ, ನಿರುದ್ಯೋಗವನ್ನು ತೆಗೆದುಹಾಕುವುದು, ಕಳೆದ 10 ವರ್ಷಗಳಲ್ಲಿ ಸಂಭವಿಸಿದ ಎಲ್ಲಾ ಸಂಕಷ್ಟಗಳನ್ನು ತೆಗೆದುಹಾಕಲು ಸಾಧ್ಯ ಎಂದು ಅವರು ಹೇಳಿದ್ದಾರೆ. ಆದರೆ ಪಿಡಿಪಿ ಮಾತ್ರ ಮೈತ್ರಿ ಬಗ್ಗೆ ಒಲವು ತೋರುವಂತೆ ಕಾಣುತ್ತಿಲ್ಲ.

ಈ ಸುದ್ದಿಯನ್ನೂ ಓದಿ: Exit poll 2024: ಕಾಶ್ಮೀರದಲ್ಲಿ ಅತಂತ್ರ, ಕಾಂಗ್ರೆಸ್‌-NC ಮೈತ್ರಿಗೆ ಅತಿ ಹೆಚ್ಚು ಸ್ಥಾನ; ಬಿಜೆಪಿಯಿಂದಲೂ ಪ್ರಬಲ ಸ್ಪರ್ಧೆ