Saturday, 14th December 2024

ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ 2,100 ಕೋಟಿ ಮೊತ್ತದ ಚೆಕ್‌ ದೇಣಿಗೆ

ಲಕ್ನೋ: ಅಯೋಧ್ಯೆಯ ರಾಮಮಂದಿರ ಟ್ರಸ್ಟ್‌ಗೆ ದಾನಿಯೊಬ್ಬರು ಬರೋಬ್ಬರಿ 2,100 ಕೋಟಿ ಮೊತ್ತದ ಚೆಕ್‌ ಕಳುಹಿಸಿದ್ದಾರೆ. ಈ ಚೆಕ್‌ ಅನ್ನು ಪ್ರಧಾನಮಂತ್ರಿ ಸಹಾಯ ನಿಧಿ ಹೆಸರಲ್ಲಿ ಟ್ರಸ್ಟ್‌ಗೆ ಪೋಸ್ಟ್‌ ಮಾಡಲಾಗಿದೆ.

ಇದೀಗ ಈ ಚೆಕ್‌ ಬಗ್ಗೆ ಸಂಪೂರ್ಣ ವಿವರ ತಿಳಿಯಲು ಪ್ರಧಾನಿ ಸಚಿವಾಲಯವನ್ನು ಸಂಪರ್ಕಿಸಲು ಟ್ರಸ್ಟ್‌ ಮುಂದಾಗಿದೆ.

ರಾಮಮಂದಿರ ಟ್ರಸ್ಟ್‌ 2,600 ಕೋಟಿ ಹಣವನ್ನು ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿದೆ. ಶ್ರೀರಾಮ ಜನಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ರಾಯ್‌ ಅವರು ಪ್ರಧಾನಮಂತ್ರಿಗಳ ಪರಿಹಾರ ನಿಧಿಯ ಹೆಸರಿನಲ್ಲಿ ಬರೆದ ಚೆಕ್‌ನ್ನು ಅಂಚೆ ಮೂಲಕ ಟ್ರಸ್ಟ್‌ಗೆ ಕಳುಹಿಸಲಾಗಿದೆ ಎಂದು ಖಚಿತ ಪಡಿಸಿದ್ದಾರೆ.

ಎರಡು ದಿನಗಳ ಹಿಂದೆಯೇ ಚೆಕ್‌ ತಮ ಕಚೇರಿಗೆ ತಲುಪಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಪ್ರಧಾನಿ ಕಚೇರಿಗೆ ಕಳುಹಿಸು ವಂತೆ ಟ್ರಸ್ಟ್‌ನ ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದು ತಿಳಿಸಿದ್ದಾರೆ.

ಮತ್ತೊಂದೆಡೆ, ಶ್ರೀರಾಮ ಜನಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಗುರುವಾರ 2023-24ನೇ ಹಣಕಾಸು ವರ್ಷದ ಆದಾಯ ಮತ್ತು ವೆಚ್ಚದ ವಿವರಗಳನ್ನು ಬಹಿರಂಗಪಡಿಸಿದೆ. ಕಳೆದ ವರ್ಷ ದೇವಸ್ಥಾನ ನಿರ್ಮಾಣಕ್ಕೆ 776 ಕೋಟಿ ರೂ., ದೇವಸ್ಥಾನಕ್ಕೆ 540 ಕೋಟಿ ರೂ., ಹಾಗೂ ಇತರೆ ವೆಚ್ಚಕ್ಕೆ 136 ಕೋಟಿ ವೆಚ್ಚ ಮಾಡಲಾಗಿದೆ ಎಂದು ವಿವರಿಸಿದೆ.

ಸಭೆಯ ಅಧ್ಯಕ್ಷತೆಯನ್ನು ಶ್ರೀರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷ ಮಹಂತ್‌ ನೃತ್ಯ ಗೋಪಾಲ್‌ ದಾಸ್‌‍ ವಹಿಸಿದ್ದರು. ಇಡೀ ದೇವಾಲಯ ನಿರ್ಮಾಣಕ್ಕೆ ಈವರೆಗೆ 1,850 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ಆರ್ಥಿಕ ವರ್ಷದಲ್ಲಿ 850 ಕೋಟಿ ರೂ. ವೆಚ್ಚವಾಗಲಿದೆ ಎಂದು ಹೇಳಲಾಗಿದೆ.

ದೇವಸ್ಥಾನದ ಹೆಸರಿನಲ್ಲಿ ಬ್ಯಾಂಕ್‌ ಖಾತೆಯಲ್ಲಿ ಎಫ್‌ಡಿ ರೂಪದಲ್ಲಿ 2,600 ಕೋಟಿ ರೂ. ಇದೆ ಎಂದು ಚಂಪತ್ರಾಯ್‌ ಬಹಿರಂಗಪಡಿಸಿದ್ದಾರೆ. 900 ಕೆಜಿ ಬೆಳ್ಳಿ ಹಾಗೂ 20 ಕೆಜಿ ಚಿನ್ನವನ್ನು ಸೆಕ್ಯುರಿಟಿ ಪ್ರಿಂಟಿಂಗ್‌ ಮತ್ತು ಮಿಂಟಿಂಗ್‌ ಕಾರ್ಪೊರೇಷನ್‌ಗೆ ಕಳುಹಿಸಲಾಗಿದೆ.