Friday, 13th December 2024

Baba Siddique: ಸಲ್ಮಾನ್‌ ಖಾನ್‌ ಜತೆ ನಂಟು ಹೊಂದಿರೋರಿಗೆ ಇದೇ ಗತಿ; ಬಿಷ್ಣೋಯ್‌ ಗ್ಯಾಂಗ್ ಎಚ್ಚರಿಕೆ

SALMAN KHAN

ನವದೆಹಲಿ: ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ(Baba Siddique) ಹತ್ಯೆಯ ಹೊಣೆ ಹೊತ್ತುಕೊಂಡಿರುವ ಬೆನ್ನಲ್ಲೇ ಲಾರೆನ್ಸ್‌ ಬಿಷ್ಣೋಯ್‌ ಗ್ಯಾಂಗ್‌(Lawrence Bishnoi) ಬಾಲಿವುಡ್‌ ನಟ ಸಲ್ಮಾನ್‌ ಖಾನ್‌(Salman Khan)ಗೆ ಯಾರೂ ಸಹಾಯ ಮಾಡುತ್ತಾರೋ ಅವರಿಗೆ ಇದೇ ಗತಿ ಎಂದು ಎಚ್ಚರಿಕೆ ನೀಡಿದ್ದಾರೆ. ಸಲ್ಮಾನ್ ಖಾನ್‌ಗೆ ಸಹಾಯ ಮಾಡುವ ಯಾರಾದರೂ, ಅವರ ಮನೆ ಬಳಿ ಈಗಾಗಲೇ ಎಚ್ಚರಿಕೆಯ ಗುಂಡು ಹಾರಿಸಿದ್ದು, ಅವರ ಅಡ್ಡಹಾದಿಯಲ್ಲಿರುತ್ತಾರೆ ಎಂದು ಬೆದರಿಕೆ ಹಾಕಿದ್ದಾರೆ.

ಬಾಬಾ ಸಿದ್ದಿಕಿ ಅವರ ಹತ್ಯೆಯಲ್ಲಿ ಗ್ಯಾಂಗ್‌ಸ್ಟರ್‌ ಲಾರೆನ್ಸ್ ಬಿಷ್ಣೋಯ್ ಮತ್ತು ನಟ ಸಲ್ಮಾನ್ ಖಾನ್ ನಡುವಿನ ದ್ವೇಷ ಸೇರಿದಂತೆ ಎಲ್ಲಾ ಸಂಭಾವ್ಯ ಕೋನಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್‌ ಸಲ್ಮಾನ್ ಖಾನ್‌ಗೆ ಪದೇಪದೆ ಬೆದರಿಕೆ ಒಡ್ಡುತ್ತಿದ್ದು ಕೊಲೆ ಮಾಡುವುದಾಗಿ ಹೇಳಿದ್ದಾನೆ. ಸಲ್ಮಾನ್ ಮತ್ತು ಬಾಬಾ ಸಿದ್ದಿಕಿ ಆಪ್ತರಾಗಿರುವ ಕಾರಣ ಅದೇ ಕೋಪದಲ್ಲಿ ಹತ್ಯೆ ಮಾಡಿದ್ದಾನೆ ಎಂಬುವ ವಾದವಿದೆ. ಈ ಹಿನ್ನೆಲೆಯಲ್ಲೂ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ.

ಸಿದ್ದಿಕ್ ಅದ್ದೂರಿ ಪಾರ್ಟಿಗಳಿಗೆ ಹೆಸರುವಾಸಿಯಾಗಿದ್ದರು ಮತ್ತು ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ನಡುವಿನ ಐದು ವರ್ಷಗಳ ಶೀತಲ ಸಮರವನ್ನು 2013 ರಲ್ಲಿ ಅವರ ‘ಇಫ್ತಾರ್’ ಪಾರ್ಟಿಯಲ್ಲಿ ಪರಿಹರಿಸಿದ್ದರು. ಕಳೆದ ವರ್ಷದಿಂದ ಸಲ್ಮಾನ್ ಖಾನ್ ಅವರ ನಿಕಟ ಸಂಬಂಧಕ್ಕಾಗಿ ಕನಿಷ್ಠ ಇಬ್ಬರು ಸೆಲೆಬ್ರಿಟಿಗಳ ಮೇಲೆ ಬಿಷ್ಣೋಯ್ ಗ್ಯಾಂಗ್ ದಾಳಿ ನಡೆಸಿತ್ತು.

ಸಲ್ಮಾನ್ ಖಾನ್ ಮೇಲೆ ಏಕೆ ದ್ವೇಷ?

2022 ರಲ್ಲಿ ಸಂಗೀತಗಾರ ಸಿಧು ಮೂಸ್ ವಾಲಾ ಹತ್ಯೆಯ ಹೊಣೆಗಾರಿಕೆಯ ನಂತರ ಭಾರೀ ಸುದ್ದಿಯಲ್ಲಿರುವ ಬಿಷ್ಣೋಯ್ ಗ್ಯಾಂಗ್ ಸಲ್ಮಾನ್‌ ಖಾನ್‌ ಅವರನ್ನೇ ಏಕೆ ಗುರಿ ಮಾಡುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಸೆಪ್ಟೆಂಬರ್ 1998 ರಲ್ಲಿ ‘ಹಮ್ ಸಾಥ್ ಸಾಥ್ ಹೈ’ ಸಿನಿಮಾದ ಚಿತ್ರೀಕರಣ ಜೋಧ್‌ಪುರ ಬಳಿಯ ಮಥಾನಿಯಾದ ಬವಾದ್‌ ನಡೆಯುತ್ತಿದ್ದಾಗ ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಕೇಳಿಬಂದಿತ್ತು. ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುವ ಬಿಷ್ಣೋಯ್ ಸಮುದಾಯದ ಅಸಮಾಧಾನಕ್ಕೆ ಇದು ಕಾರಣವಾಗಿತ್ತು. ಇದೇ ದ್ವೇಷಕ್ಕೆ ಸಲ್ಮಾನ್‌ ಖಾನ್‌ ಹತ್ಯೆಗೆ ಬಿಷ್ಣೋಯ್‌ ಗ್ಯಾಂಗ್‌ ಹೊಂಚು ಹಾಕುತ್ತಿದೆ.

ಭದ್ರತೆ ಹೆಚ್ಚಳ

ಏತನ್ಮಧ್ಯೆ, ಸಲ್ಮಾನ್ ಖಾನ್ ಅವರ ಮನೆಯ ಸುತ್ತಲೂ ಭದ್ರತೆಯನ್ನು ಬಿಗಿಗೊಳಿಸಲಾಗಿದೆ – ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗಳ ಹೊರಗೆ ಏಪ್ರಿಲ್ 14 ರಂದು ಗುಂಡಿನ ದಾಳಿ ನಡೆದಿತ್ತು. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವೀಸ್ ಮತ್ತು ಅಜಿತ್ ಪವಾರ್ ಅವರ ನಿವಾಸಗಳಿರುವ ದಕ್ಷಿಣ ಮುಂಬೈನ ಮಲಬಾರ್ ಹಿಲ್‌ನಲ್ಲಿ ಬಿಗಿ ಭದ್ರತೆಯನ್ನು ಸಹ ಹೆಚ್ಚಿಸಲಾಗಿದೆ. 48 ವರ್ಷಗಳಿಂದ ಕಾಂಗ್ರೆಸ್‌ನ ಭಾಗವಾಗಿದ್ದ ಸಿದ್ದಿಕಿ ಈ ವರ್ಷದ ಆರಂಭದಲ್ಲಿ ಪವಾರ್ ಅವರ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಈ ಸುದ್ದಿಯನ್ನೂ ಓದಿ: Baba Siddique : ಸಲ್ಮಾನ್ ಮೇಲಿನ ದ್ವೇಷಕ್ಕೆ ಬಾಬಾ ಸಿದ್ದಿಕಿಯನ್ನು ಕೊಲ್ಲಿಸಿದನೇ ಗ್ಯಾಂಗ್‌‌ಸ್ಟರ್ ಲಾರೆನ್ಸ್ ಬಿಷ್ಣೋಯಿ?