Wednesday, 11th December 2024

ಅಂತಾರಾಷ್ಟ್ರೀಯ ವಿಮಾನಗಳ ನಿಷೇಧ ಆಗಸ್ಟ್ 31ರವರೆಗೆ ವಿಸ್ತರಣೆ

ನವದೆಹಲಿ: ಅಂತಾರಾಷ್ಟ್ರೀಯ ಪ್ರಯಾಣಿಕರ ವಿಮಾನಗಳ ಮೇಲಿನ ಕೋವಿಡ್ ಸಂಬಂಧಿತ ಪ್ರಯಾಣ ನಿಷೇಧವನ್ನ ಆಗಸ್ಟ್ 31ರವರೆಗೆ ವಿಸ್ತರಿಸಲು ಭಾರತ ನಿರ್ಧರಿಸಿದೆ. ಕೋವಿಡ್-19 ರ ಮೂರನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಿವಿಧ ದೇಶಗಳಲ್ಲಿ ಕರೋನಾ ವೈರಸ್ʼನ ಡೆಲ್ಟಾ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಪ್ರಯಾಣ ನಿಷೇಧವನ್ನು ಜು.31ರ ಹಿಂದಿನ ಗಡುವಿನಿಂದ ಮತ್ತೊಮ್ಮೆ ವಿಸ್ತರಿಸಲಾಗಿದೆ.

ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾ ನಿರ್ದೇಶಕ ಜು.30ರ ಶುಕ್ರವಾರ ಹೊರಡಿಸಿದ ಸುತ್ತೋಲೆಯಲ್ಲಿ, ಅಂತರರಾಷ್ಟ್ರೀಯ ವಿಮಾನ ಗಳ ನಿಷೇಧವು ಆಗಸ್ಟ್ 31ರ 2359 ಗಂಟೆಯವರೆಗೆ ಜಾರಿ ಯಲ್ಲಿರಲಿದೆ ಎಂದು ಹೇಳಿದೆ. ಇದು ಸರಕು ವಿಮಾನಗಳು ಮತ್ತು ಡಿಜಿಸಿಎ ಅನುಮೋದಿಸಿದ ವಿಮಾನಗಳಿಗೆ ಅನ್ವಯಿಸುವುದಿಲ್ಲ.

ವಿಶೇಷ ಅಂತರರಾಷ್ಟ್ರೀಯ ವಿಮಾನಗಳು ಮೇ ನಿಂದ ‘ವಂದೇ ಭಾರತ್ ಮಿಷನ್’ ಅಡಿಯಲ್ಲಿ ಮತ್ತು ಜುಲೈನಿಂದ ಆಯ್ದ ರಾಷ್ಟ್ರಗಳೊಂದಿಗೆ ದ್ವಿಪಕ್ಷೀಯ ‘ಏರ್ ಬಬಲ್’ ವ್ಯವಸ್ಥೆಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಅಮೆರಿಕ, ಯುಕೆ, ಯುಎಇ, ಕೀನ್ಯಾ, ಭೂತಾನ್ ಮತ್ತು ಫ್ರಾನ್ಸ್ ಸೇರಿದಂತೆ 27 ರಾಷ್ಟ್ರಗಳೊಂದಿಗೆ ಭಾರತ ಏರ್‌ ಬಬ್ಬಲ್‌ ಒಪ್ಪಂದಗಳನ್ನ ರೂಪಿಸಿದೆ.