Friday, 13th December 2024

Benjamin Netanyahu: ಇಸ್ರೇಲ್‌ಗೆ ಭಾರತ ವರ; ವಿಶ್ವಸಂಸ್ಥೆಯಲ್ಲಿ ಹಾಡಿಹೊಗಳಿದ ನೆತನ್ಯಾಹು

Benjamin Netanyahu

ಬೈರುತ್‌: ಇಸ್ರೇಲ್‌ ಮತ್ತು ಲೆಬನಾನ್‌ ನಡುವೆ ಭುಗಿಲೆದ್ದಿರುವ ಸಂಘರ್ಷ(Lebanon-Israel war)ದ ನಡುವೆ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು(Benjamin Netanyahu) ವಿಶ್ವಸಂಸ್ಥೆ(UN)ಯಲ್ಲಿ ಭಾರತದ ನಕ್ಷೆಯನ್ನು ತೋರಿಸಿ ಹಾಡಿ ಹೊಗಳಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಇರಾನ್‌ ಮತ್ತು ಭಾರತದ ಭೂಪಟವನ್ನು ಹಿಡಿದು, ಮಧ್ಯ ಪ್ರಾಚ್ಯ ದೇಶಗಳು ಇಸ್ರೇಲ್‌ ಒಂದು ಶಾಪ ಆಗಿದ್ದು, ಭಾರತ ವರವಾಗಿದೆ ಎಂದು ಹೊಗಳಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬೆಂಜಮಿನ್ ನೆತನ್ಯಾಹು ಭಾಷಣ ಮಾಡುತ್ತಾ , ಸೌದಿ ಅರೇಬಿಯಾ, ಜೋರ್ಡಾನ್, ಈಜಿಪ್ಟ್, ಸುಡಾನ್, ಭಾರತ ಮತ್ತು ಯುಎಇ ಸೇರಿದಂತೆ ಇಸ್ರೇಲ್‌ಗೆ ಸ್ನೇಹ ಪರವಾಗಿರುವ ದೇಶಗಳ ಚಿತ್ರವನ್ನು ತೋರಿಸಿ ʼವರʼ ಎಂದು ಬಣ್ಣಿಸಿದ್ದಾರೆ. ಅದೇ ರೀತಿ ಇರಾನ್‌,ಇರಾಕ್‌ ಸಿರಿಯಾ ಮ್ಯಾಪ್‌ ತೋರಿಸಿ ಶಾಪ ಎಂದು ಹೇಳಿದ್ದಾರೆ.

ನೆತನ್ಯಾಹು ಅವರು ತಮ್ಮ ಭಾಷಣದಲ್ಲಿ, ಇರಾನ್ ಅನ್ನು ಬಹಳ ಸಮಯದವರೆಗೆ ಜಗತ್ತು ಸಮಾಧಾನದಿಂದ ನೋಡಿದೆ. ಆದರೆ ಅದರ ಆಂತರಿಕ ದಮನದ ವಿಚಾರದಲ್ಲಿ ಕುರುಡಾಗಿ ಬಾಹ್ಯ ಆಕ್ರಮಣ ನಡೆಸುತ್ತಿದೆ. ಈ ತುಷ್ಟೀಕರಣ ಕೊನೆಗೊಳ್ಳಬೇಕು ಮತ್ತು ಈಗಲೇ ಕೊನೆಯಾಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ ನಿರಂಕುಶಾಧಿಕಾರಿಗಳಿಗೆ ನನ್ನ ಬಳಿ ಸಂದೇಶವಿದೆ. ನೀವು ನಮ್ಮನ್ನು ಹೊಡೆದರೆ, ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಗುಡುಗಿದರು.

ಲೆಬನಾನ್‌ನ ದಕ್ಷಿಣ ಬೈರುತ್‌ನಲ್ಲಿರುವ ಹೆಜ್ಬುಲ್ಲಾ(Hezbollah)ದ ಮುಖ್ಯಕಚೇರಿಯನ್ನು ಗುರಿಯಾಗಿಸಿಕೊಂಡು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah) ಸಾವನ್ನಪ್ಪಿದ್ದಾನೆ. ಈ ಬಗ್ಗೆ ನಿನ್ನೆ ಇಸ್ರೇಲ್‌ ಸೇನೆ ಅಧಿಕೃತವಾಗಿ ಮಾಹಿತಿ ಹೊರಹಾಕಿತ್ತು.

ಇರಾನ್‌ನ ಯುಎನ್ ರಾಯಭಾರಿ ಅಮೀರ್ ಸಯೀದ್ ಇರಾವನಿ ಅವರು 15 ಸದಸ್ಯರಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಸ್ರೇಲ್‌ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಔಪಚಾರಿಕ ಪತ್ರವನ್ನು ಕಳುಹಿಸಿದ್ದಾರೆ. ರಾಜತಾಂತ್ರಿಕ ನೀತಿಯನ್ನು ಉಲ್ಲಂಘಿಸಿ ನಡೆಯುವ ಯಾವುದೇ ದಾಳಿಯನ್ನೂ ಇರಾನ್‌ ಇನ್ನು ಮುಂದೆ ಸಹಿಸಲ್ಲ. ಇರಾನ್ ತನ್ನ ಪ್ರಮುಖ ರಾಷ್ಟ್ರೀಯ ಮತ್ತು ಭದ್ರತಾ ಹಿತಾಸಕ್ತಿಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ತನ್ನ ಹಕ್ಕುಗಳನ್ನು ಚಲಾಯಿಸಲು ಹಿಂಜರಿಯುವುದಿಲ್ಲ ಎಂದು ಇರಾವಾಣಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಹಸನ್ ನಸ್ರಲ್ಲಾ ಫೆಬ್ರವರಿ 1992ರಿಂದ ಹೆಜ್ಬುಲ್ಲಾದ ಮಿಲಿಟರಿ ಗುಂಪನ್ನು ಮುನ್ನಡೆಸುತ್ತಿದ್ದಾನೆ. ಈತ ಗುಂಪಿನ ಮೂರನೇ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇಸ್ರೇಲ್‌ ಸೈನಿಕರಿಂದ ಕೊಲ್ಲಲ್ಪಟ್ಟ ಅಬ್ಬಾಸ್ ಅಲ್-ಮುಸಾವಿಯ ಉತ್ತರಾಧಿಕಾರಿಯಾಗಿದ್ದಾನೆ. 64 ವರ್ಷದ ಈತ ಬಡ ದಿನಸಿ ವ್ಯಾಪಾರಿಯೊಬ್ಬನ ಮಗ. ನಸ್ರಲ್ಲಾ 1960ರ ಆಗಸ್ಟ್ 31ರಂದು ಬೈರುತ್‌ನ ಉತ್ತರ ಬುರ್ಜ್ ಹಮ್ಮದ್ ಉಪನಗರದಲ್ಲಿ ಜನಿಸಿದ್ದ. ಆತನಿಗೆ 8 ಮಂದಿ ಒಡಹುಟ್ಟಿದವರು ಮತ್ತು 4 ಮಂದಿ ಮಕ್ಕಳಿದ್ದಾರೆ. ಮಧ್ಯಪ್ರಾಚ್ಯದ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬನಾದ ಹಸನ್ ನಸ್ರಲ್ಲಾ 2006ರಲ್ಲಿ ಇಸ್ರೇಲ್ ಜತೆಗಿನ ಯುದ್ಧದ ನಂತರ ತಲೆಮರೆಸಿಕೊಂಡಿದ್ದ. 1992ರಲ್ಲಿ ಹೆಜ್ಬುಲ್ಲಾದ ಕಮಾಂಡ್ ಆದಾಗಿನಿಂದ ನಸ್ರಲ್ಲಾ ಸಂಘಟನೆಯನ್ನು ಶಕ್ತಗೊಳಿಸಿದ್ದ.

ಈ ಸುದ್ದಿಯನ್ನೂ ಓದಿ: J&K news : ಹೆಜ್ಬುಲ್ಲಾದ ಹಸನ್ ನಸ್ರಲ್ಲಾ ಹತ್ಯೆ ವಿರೋಧಿಸಿ ಕಾಶ್ಮೀರದ ಶ್ರೀನಗರದಲ್ಲಿ ಪ್ರತಿಭಟನೆ