Wednesday, 11th December 2024

ಭಾರತ್ ಜೋಡೋ ಯಾತ್ರೆಯ ಎರಡನೇ ಹಂತ ಆರಂಭ ಶೀಘ್ರ

ನವದೆಹಲಿ: ಭಾರತ್ ಜೋಡೋ ಯಾತ್ರೆಯ ಎರಡನೇ ಹಂತವನ್ನು ಆರಂಭಿಸಲು ಕಾಂಗ್ರೆಸ್ ಯೋಚಿಸುತ್ತಿದೆ. ಡಿಸೆಂಬರ್ 2023 ಮತ್ತು ಫೆಬ್ರವರಿ 2024 ರ ನಡುವೆ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರಾ 2.0 ಆರಂಭವಾಗಲಿದೆ. ಭಾಗವಹಿಸುವವರು ರಾಹುಲ್ ಗಾಂಧಿ ಅವರೊಂದಿಗೆ ಕಾಲ್ನಡಿಗೆ ಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾರೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ (ದಕ್ಷಿಣದಿಂದ ಉತ್ತರ) ಭಾರತ್‌ ಜೋಡೋ ಯಾತ್ರೆ ಮೂಲಕ ದೇಶದ ಗಮನ ಸೆಳೆದಿದ್ದ ಕಾಂಗ್ರೆಸ್‌ ಈಗ ಪೂರ್ವದಿಂದ ಪಶ್ಚಿಮಕ್ಕೆ ಮತ್ತೊಂದು ಯಾತ್ರೆ ಕೈಗೊಳ್ಳಲು ಪ್ಲಾನ್‌ ಮಾಡಿರುವುದು ಬೆಂಬಲಿಗರಲ್ಲಿ ಸಂತಸ ತಂದಿದೆ. ಪೂರ್ವದಿಂದ ಪಶ್ಚಿಮಕ್ಕೆ ಕೈಗೊಳ್ಳುವ ಯಾತ್ರೆಯು ಬಹುಶಃ ಅರುಣಾಚಲ ಪ್ರದೇಶದ ಪಾಸಿಘಾಟ್‌ನಿಂದ ಗುಜರಾತ್‌ನ ಪೋರಬಂದರ್‌ವರೆಗೆ ನಡೆಯಬಹುದು ಎಂಬ ಸುಳಿವು ಸಿಕ್ಕಿದೆ.

ಭಾರತ್ ಜೋಡೋ ಯಾತ್ರೆಯ ಮೊದಲ ಹಂತವು ಸೆಪ್ಟೆಂಬರ್ 7, 2022 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಸರಿಸುಮಾರು 4,080 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸಿದ ಬಳಿಕ ಯಾತ್ರೆಯು ಜನವರಿ 2023ರಲ್ಲಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯವಾಯಿತು.

ಯಾತ್ರೆಯು 12 ರಾಜ್ಯಗಳ 75 ಜಿಲ್ಲೆಗಳ ಮೂಲಕ 126 ದಿನಗಳವರೆಗೆ ಸಾಗಿತು.

ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಸೆಪ್ಟೆಂಬರ್ 2023 ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪಕ್ಷವು ಎರಡನೇ ಹಂತದ ಯಾತ್ರೆಯನ್ನು ಯೋಜಿಸುತ್ತಿದೆ ಮತ್ತು ಯೋಜನೆಯು ನಿರ್ಮಾಣ ಹಂತದಲ್ಲಿದೆ ಎಂದು ಪ್ರಸ್ತಾಪಿಸಿದ್ದರು.