Wednesday, 11th December 2024

ವಿಶ್ವಾಸಮತ ಯಾಚನೆ ಮುನ್ನ ಬಿಹಾರ ಸ್ಪೀಕರ್ ರಾಜೀನಾಮೆ

ಪಾಟ್ನಾ: ಬಿಹಾರದಲ್ಲಿ ಬುಧವಾರ ನಿತೀಶ್ ಕುಮಾರ್ ವಿಶ್ವಾಸಮತ ಯಾಚನೆ ಮಾಡಲಿದ್ದು, ಇದಕ್ಕೂ ಮೊದಲೇ ಬಿಜೆಪಿ ನಾಯಕ ವಿಜಯ್ ಕುಮಾರ್ ಸಿನ್ಹಾ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಮಹಾಮೈತ್ರಿ ಸರ್ಕಾರ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಹಿನ್ನೆಲೆಯಲ್ಲಿ ಸಿನ್ಹಾ ತಮ್ಮ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.

“ಬಹುಮತಕ್ಕೆ ತಲೆಬಾಗಿದ್ದೇನೆ” ಎಂದು ಹೇಳಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ ವಿಜಯ್ ಕುಮಾರ್ ಸಿನ್ಹಾ, ನರೇಂದ್ರ ನಾರಾಯಣನ್ ಯಾದವ್ ಅವರು ಸ್ಪೀಕರ್ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸಲಹೆಯ ಮೇರೆಗೆ ಬಿಹಾರ ವಿಧಾನಸಭೆಯ ಸೆಕ್ರೆಟರಿಯೇಟ್ ಮಂಗಳವಾರ ಸಂಜೆ ಸಿನ್ಹಾ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 2 ದಿನಗಳ ವಿಶೇಷ ಅಧಿವೇಶನದ ವೇಳಾಪಟ್ಟಿ ಬದಲಾಯಿಸಿತ್ತು. ಇದಕ್ಕೂ ಮುನ್ನ ಸಿನ್ಹಾ ರಾಜೀನಾಮೆ ನೀಡಲು ನಿರಾಕರಿಸಿದ್ದರು.