ನವದೆಹಲಿ: ಕೇಂದ್ರ ಸರ್ಕಾರವು ಕನಿಷ್ಠ ಹತ್ತನೇ ತರಗತಿಯವರೆಗೆ ಓದಿರುವ, 18ರಿಂದ 70 ವರ್ಷ ವಯಸ್ಸಿನ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸುವ ಉದ್ದೇಶದಿಂದ ಎಲ್‌ಐಸಿ(LIC) ಮೂಲಕ, ” ಬಿಮಾ ಸಖಿʼ ಎಂಬ ಯೋಜನೆ(Bima Sakhi Scheme)ಯನ್ನು ಇದೀಗ ಜಾರಿಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿಯವರೇ ಇದಕ್ಕೆ ಚಾಲನೆ ನೀಡಿದ್ದಾರೆ. ವಿಶೇಷ ಏನೆಂದರೆ ಎಸ್‌ಎಸ್‌ಎಲ್‌ಸಿ ಓದಿರುವ ಮಹಿಳೆಯರೂ ಎಲ್‌ಐಸಿ ಏಜೆಂಟರಾಗಿ ಕರಿಯರ್ ರೂಪಿಸಿಕೊಳ್ಳಲು ಇಲ್ಲಿ ಅವಕಾಶ ಸಿಗಲಿದೆ. ಮಾತ್ರವಲ್ಲದೆ ಮೊದಲ ಮೂರು ವರ್ಷಗಳ ಕಾಲ ಪ್ರತಿ ತಿಂಗಳು ಸ್ಟೈಫಂಡ್ ಹಣವನ್ನೂ ಎಲ್‌ಐಸಿ ನೀಡಲಿದೆ.
ಈ ಬಿಮಾ ಸಖಿ ಯೋಜನೆಯಲ್ಲಿ, ಮಹಿಳಾ ಎಲ್‌ಐಸಿ ಏಜೆಂಟರನ್ನು “ಮಹಿಳಾ ಕರಿಯರ್ ಏಜೆಂಟ್ʼ ಎಂದು ಪರಿಗಣಿಸಲಾಗಿದೆ. ಸಂಕ್ಷಿಪ್ತವಾಗಿ ಎಂಸಿಎ ಎನ್ನಲಾಗಿದೆ. ಆಯ್ಕೆಯಾದವರಿಗೆ ಈ ಯೋಜನೆಯಲ್ಲಿ ಮೊದಲ ವರ್ಷ ಪ್ರತಿ ತಿಂಗಳು 7,000 ರೂ. ಸ್ಟ್ರೈಫಂಡ್ ಸಿಗಲಿದೆ. ಅಂದರೆ ವರ್ಷಕ್ಕೆ 84,000 ರೂ. ದೊರೆಯಲಿದೆ. ಮೊದಲ ವರ್ಷ 24 ಪಾಲಿಸಿಗಳನ್ನು ಮಾರಾಟ ಮಾಡಿದರೆ 48,000 ರೂ.ಗಳ ಕಮಿಶನ್ ಕೂಡ ಸಿಗಲಿದೆ.
ಎರಡನೇ ವರ್ಷ, ಪ್ರತಿ ತಿಂಗಳಿಗೆ 6,000 ರೂ. ಅಂದರೆ ವರ್ಷಕ್ಕೆ 72,000 ರೂ. ಸ್ಟೈಫಂಡ್ ಸಿಗಲಿದೆ. ಮೂರನೇ ವರ್ಷ, ಪ್ರತಿ ತಿಂಗಳಿಗೆ 5,000 ರೂ. ಅಂದರೆ ವರ್ಷಕ್ಕೆ 60,000 ರೂ. ಸ್ಟೈಫಂಡ್ ಸಿಗಲಿದೆ. ಇದರ ಜತೆಗೆ ವಿಮೆ ಪಾಲಿಸಿಗಳನ್ನು ಮಾರಾಟ ಮಾಡಿದ್ದಕ್ಕೆ ಕಮಿಶನ್ ಕೂಡ ಸಿಗಲಿದೆ. ಒಟ್ಟು ಎರಡು ಲಕ್ಷದ ಹದಿನಾರು ಸಾವಿರ ರೂಪಾಯಿಗಳ ಸ್ಟೈಫಂಡ್ ಸಿಗಲಿದೆ.
ಎಲ್‌ಐಸಿ ಈ ಯೋಜನೆ ಬಗ್ಗೆ ಕೆಲವು ಮಾರ್ಗದರ್ಶಿಯನ್ನು ಪ್ರಕಟಿಸಿದೆ. ಅದರ ವಿವರ ಹೀಗಿದೆ.
ಎಲ್‌ಐಸಿ ಬಿಮಾ ಸಖಿ ಎನ್ನುವುದು ಒಂದು ಸ್ಟೈಫಂಡ್ ಯೋಜನೆಯಾಗಿದ್ದು, ಪ್ರತಿಷ್ಠಿತ ಎಲ್‌ಐಸಿ ಸಂಸ್ಥೆಯ ಅಡಿಯಲ್ಲಿ ವಿಮೆ ಏಜೆಂಟ್ ಆಗಿ ದುಡಿಯುವ ಅವಕಾಶ ಮಹಿಳೆಯರಿಗೆ ಸಿಗುತ್ತದೆ. ಮುಖ್ಯವಾಗಿ ಗ್ರಾಮೀಣ ಮಹಿಳೆಯರಿಗೆ ಆದ್ಯತೆ ಸಿಗಲಿದೆ.
ಎಲ್‌ಐಸಿಯು ಮುಂದಿನ 12 ತಿಂಗಳುಗಳಲ್ಲಿ ಒಂದು ಲಕ್ಷ ಮತ್ತು ಮೂರು ವರ್ಷಗಳಲ್ಲಿ ಎರಡು ಲಕ್ಷ ಬಿಮಾ ಸಖಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಿದೆ. ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಪಾರ್ಟ್ ಟೈಮ್ ಆಗಿಯೋ, ಅಥವಾ ಪೂರ್ಣಕಾಲಿಕವಾಗಿಯೋ ವಿಮೆ ಏಜೆಂಟ್ ಆಗಬಹುದು. ಬಿಮಾ ಸಖಿಯರಿಗೆ ಎಲ್‌ಐಸಿ, ಮೊದಲ ಮೂರು ವರ್ಷಗಳ ಕಾಲ ಸಮಗ್ರ ತರಬೇತಿಯನ್ನು ನೀಡಲಿದೆ. ಎಲ್‌ಐಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕವೇ ಬಿಮಾ ಸಖಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಎಲ್‌ಐಸಿಯ ಮಹಿಳಾ ಕರಿಯರ್ ಏಜೆಂಟ್ ಆಗಲು ಬೇಕಾಗುವ ದಾಖಲೆಗಳು ಹೀಗಿವೆ
- ಎರಡು ಪಾಸ್‌ಪೋರ್ಟ್ ಸೈಜಿನ ಫೋಟೊ.
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
- ಎಸ್ಸೆಸ್ಸೆಲ್ಸಿ ಪಾಸಾಗಿದ್ದಕ್ಕೆ ಸರ್ಟಿಫಿಕೇಟ್
- ಬ್ಯಾಂಕ್ ಖಾತೆ ವಿವರ.
ಹಾಗಾದರೆ ಈಗಾಗಲೇ ಎಲ್ ಐಸಿ ಏಜೆಂಟ್ ಆಗಿರುವ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದೇ? ಎಂದು ನೀವು ಕೇಳಬಹುದು. ಇದಕ್ಕೆ ಸಂಬಂಧಿಸಿ ಎಲ್‌ಐಸಿ ಕೆಲ ನಿಬಂಧನೆಗಳನ್ನು ವಿಧಿಸಿದೆ.
ಹಾಲಿ ಎಲ್‌ಐಸಿ ಏಜೆಂಟರು ಮತ್ತು ಉದ್ಯೋಗಿಗಳು ಬಿಮಾ ಸಖಿ ಯೋಜನೆಯಲ್ಲಿ ಭಾಗವಹಿಸುವಂತಿಲ್ಲ. ಹಾಲಿ ಎಲ್‌ಐಸಿ ಏಜೆಂಟರ ಕುಟುಂಬದ ಸದಸ್ಯರೂ ಇದಕ್ಕೆ ಸೇರುವಂತಿಲ್ಲ. ಎಲ್‌ಐಸಿಯ ನಿವೃತ್ತ ಉದ್ಯೋಗಿಯೂ ಅರ್ಹರಾಗುವುದಿಲ್ಲ.
ಬಿಮಾ ಸಖಿ ಯೋಜನೆಗೆ ನೋಂದಣಿ ಆದ ಬಲಿಕ ವಿಮೆ ನಿಯಂತ್ರಕ ಪ್ರಾಧಿಕಾರವಾದ IRDA ವತಿಯಿಂದ, ತರಬೇತಿ ಮತ್ತು ಪರೀಕ್ಷೆ ನಡೆಯಲಿದೆ. ಪರೀಕ್ಷೆಯಲ್ಲಿ ಪಾಸಾದವರಿಗೆ ಎಲ್‌ಐಸಿಯು ಮಹಿಳಾ ಕರಿಯರ್ ಏಜೆಂಟ್ ಕೋಡ್ ಅನ್ನು ನೀಡಲಿದೆ.
ಈ ಸುದ್ದಿಯನ್ನೂ ಓದಿ: ಭವಿಷ್ಯದ ವಾಣಿಜ್ಯ ಬೆಳೆ: ಸಕ್ಕರೆ ಗಡ್ಡೆ