Wednesday, 11th December 2024

ಶುಲ್ಕ ಕಡಿಮೆ: ಡೆಲಿವರಿ ಸೇವೆ ಬಹುತೇಕ ಸ್ಥಗಿತ

ನವದೆಹಲಿ: ಜೊಮಾಟೊ ಮಾಲಿಕತ್ವದ ಇ–ಕಾಮರ್ಸ್ ಹೋಮ್ ಡೆಲಿವರಿ ಪ್ಲಾಟ್​ಫಾರ್ಮ್ ಬ್ಲಿಂಕಿಟ್​ಗೆ ಡೆಲಿವರಿ ಬಾಯ್​ಗಳ ಸ್ಟ್ರೈಕ್​ನ ಬಿಸಿ ತಾಕಿದೆ.

ಡೆಲಿವರಿ ಶುಲ್ಕ ಕಡಿಮೆಗೊಳಿಸಿದ ಕಾರಣಕ್ಕೆ ಡೆಲಿವರಿ ಬಾಯ್ಸ್ ಕಳೆದ ಮೂರ್ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿರುವ ಪರಿಣಾಮವಾಗಿ ದೆಹಲಿ ಹಾಗು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅದರ ಆನ್​ಲೈನ್ ಡೆಲಿವರಿ ಸೇವೆ ಬಹುತೇಕ ಸ್ಥಗಿತಗೊಂಡಿದೆ.

ದೆಹಲಿ, ಗುರುಗ್ರಾಮ್, ಫರೀದಾಬಾದ್, ನೋಯ್ಡಾ, ಘಾಜಿಯಾಬಾದ್ ಪ್ರದೇಶಗಳಲ್ಲಿ ಬ್ಲಿಂಕಿಟ್​ನ 100ಕ್ಕೂ ಹೆಚ್ಚು ಡಾರ್ಕ್ ಸ್ಟೋರ್​ಗಳ (Dark Stores) ಆನ್​ಲೈನ್ ಸೇವೆ ಬಂದ್ ಆಗಿದೆ. ಇದರೊಂದಿಗೆ ಈ ಪ್ರದೇಶಗಳಲ್ಲಿ ಬ್ಲಿಂಕಿಟ್ ಡೆಲಿವರಿ ಸೇವೆಯಲ್ಲಿ ಭಾರೀ ವ್ಯತ್ಯಯ ವಾಗಿದೆ.

ದೇಶಾದ್ಯಂತ ಬೆಂಗಳೂರು ಸೇರಿದಂತೆ 20 ನಗರಗಳಲ್ಲಿ ಬ್ಲಿಂಕಿಟ್ ಸುಮಾರು 400 ಡಾರ್ಕ್ ಸ್ಟೋರ್​ಗಳನ್ನು ಹೊಂದಿದೆ. ಈಗ ಅರ್ಧದಷ್ಟು ಸ್ಟೋರ್​ಗಳು ಡೆಲಿವರಿ ಬಾಯ್​ಗಳಿಲ್ಲದೇ ಆನ್​ಲೈನ್ ಡೆಲಿವರಿ ಸೇವೆಯನ್ನು ನಿಲ್ಲಿಸಿವೆ.

ಬ್ಲಿಂಕಿಟ್ ಬಹಳ ಶೀಘ್ರ ಸಮಯದಲ್ಲಿ ಡೆಲಿವರಿ ಸೇವೆಗೆ ಹೆಸರಾದ ಇ–ಕಾಮರ್ಸ್ ಕಂಪನಿ. 10 ನಿಮಿಷದಲ್ಲಿ ಡೆಲಿವರಿ ಒದಗಿಸು ತ್ತದೆ. ಜೊಮಾಟೊ, ಸ್ವಿಗ್ಗಿ, ಡುಂಜೋ, ಝೆಪ್ಟೋ ಇತ್ಯಾದಿ ಸಂಸ್ಥೆಗಳಿಗಿಂತ ಬ್ಲಿಂಕಿಟ್​ನಲ್ಲಿ ಡೆಲಿವರಿ ಹುಡುಗರಿಗೆ ಹೆಚ್ಚು ಹಣ ಸಿಗುತ್ತದೆ. ವರ್ಷದ ಹಿಂದೆ ಪ್ರತೀ ಡೆಲಿವರಿಗೆ ಶುಲ್ಕವಾಗಿ ಹುಡುಗರು 50 ರೂ ಪಡೆಯುತ್ತಿದ್ದರು. ನಂತರ ಇದು 25 ರುಪಾಯಿಗೆ ಇಳಿಕೆಯಾಯಿತು. ಈಗ ಬ್ಲಿಂಕಿಟ್ ಹೊಸ ಶುಲ್ಕ ವ್ಯವಸ್ಥೆ ಜಾರಿಗೆ ತಂದಿದೆ. ಅದರಲ್ಲಿ ಡೆಲಿವರಿ ಮಾಡಲಾಗುವ ಸ್ಥಳದ ದೂರ ಎಷ್ಟಿದೆ ಎನ್ನುವುದರ ಮೇಲೆ ಶುಲ್ಕ ನಿರ್ಧರಿಸಲಾಗುತ್ತದೆ.

ಹೊಸ ಶುಲ್ಕ ವ್ಯವಸ್ಥೆ ನಿಲ್ಲಿಸಿ, ಹಳೆಯದನ್ನೇ ಮುಂದುವರಿಸುವವರೆಗೂ ತಾವು ಮತ್ತೆ ಡೆಲಿವರಿ ಸೇವೆಗೆ ಬರುವುದಿಲ್ಲ ಎಂದು ಈ ಹುಡುಗರು ಕೆಲಸ ನಿಲ್ಲಿಸಿದ್ದಾರೆ.