Friday, 13th December 2024

ವೈವಾಹಿಕ ಸಂಗಾತಿ ಆಯ್ಕೆಯಲ್ಲಿ ಸಮಾಜ ಮೂಗು ತೂರಿಸುವಂತಿಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಒಬ್ಬ ಪುರುಷ ಅಥವಾ ಸ್ತ್ರೀ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದು, ಇದಕ್ಕೆ ಸಮಾಜವು ಮೂಗು ತೂರಿಸಬಾರದು. ಬಾಳ ಸಂಗಾತಿಯ ಆಯ್ಕೆಯ ನಿರ್ಧಾರ ವ್ಯಕ್ತಿಗೆ ಬಿಟ್ಟದ್ದು ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟದೆ. ಈ ಮೂಲಕ ಮಹಿಳೆಯೋರ್ವರ ತಂದೆ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತಿರಸ್ಕರಿಸಿದೆ.

ತನ್ನ ಪುತ್ರಿ ಖಲೀದಾ ಸುಬಿಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹಾಗೂ ಆಕೆಯನ್ನು ತನ್ನ ಉಸ್ತುವಾರಿಗೆ ನೀಡುವಂತೆ ನಿರ್ದೇಶನಗಳನ್ನು ಕೋರಿ ಅರ್ಜಿದಾರ ಜುನೆದ್ ಅಹ್ಮದ್ ಮುಜೀಬ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ.ಕೆ.ಜಾಧವ್ ಮತ್ತು ಎಸ್.ಡಿ.ಕುಲಕರ್ಣಿರನ್ನು ಒಳಗೊಂಡ ಪೀಠ ನಡೆಸಿದೆ.

ಪ್ಯಾರೆನ್ಸ್ ಪೇಟ್ರಿಯಾ ನ್ಯಾಯವು ವೈವಾಹಿಕ ಸಂಬಂಧದ ವಿಚಾರಕ್ಕೆ ಅತಿಕ್ರಮಿಸದು. ವೈವಾಹಿಕ ಸಂಬಂಧದ ನಿರ್ಧಾರ ವ್ಯಕ್ತಿಗಳ ಮೇಲೆ ಮಾತ್ರ ಅವಲಂಬಿತ. ಸಮಾಜವು ಅದಕ್ಕೆ ಮೂಗು ತೂರಿಸುವಂತಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯುವ ನ್ಯಾಯಾಲಯಗಳು ಈ ಸ್ವಾತಂತ್ರ್ಯಗಳನ್ನು ಕಾಪಾಡಬೇಕು,” ಎಂದು ನ್ಯಾಯಾಲಯವು ತಿಳಿಸಿದೆ.