Sunday, 1st December 2024

ಶಿಳ್ಳೆ ಹೊಡೆಯುವುದು ಮಹಿಳೆಯ ಘನತೆಗೆ ಧಕ್ಕೆ ತರುವಂಥದ್ದಲ್ಲ

ಮುಂಬೈ: ಮನೆಯ ಟೆರೇಸ್‌ ಮೇಲೆ ನಿಂತು ಶಿಳ್ಳೆ ಹೊಡೆಯುವ ಮೂಲಕ ಮಹಿಳೆಯ ನಮ್ರತೆಗೆ ಧಕ್ಕೆ ತಂದ ಆರೋಪ ಎದುರಿಸುತ್ತಿರುವ ಮೂವರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್ ಪೀಠವು ನಿರೀಕ್ಷಣಾ ಜಾಮೀನು ನೀಡಿದೆ.

‘ಒಬ್ಬ ವ್ಯಕ್ತಿಯು ತನ್ನ ಮನೆಯಲ್ಲಿ ಕೆಲವು ಶಬ್ದಗಳನ್ನು ಸೃಷ್ಟಿಸಿದ ಕಾರಣ, ಅದು ಮಹಿಳೆಯ ಕಡೆಗೆ ಲೈಂಗಿಕ ಸ್ವಭಾವವನ್ನು ಹೊಂದಿರುವ ಉದ್ದೇಶ ಎಂದು ನಾವು ನೇರವಾಗಿ ನಿರ್ಣಯಿಸಲು ಸಾಧ್ಯ ವಿಲ್ಲ’ ಎಂದು ನ್ಯಾಯಾಲಯ ಹೇಳಿದೆ.

ಅಹಮದ್‌ನಗರದ ನಿವಾಸಿಗಳಾದ ಲಕ್ಷ್ಮಣ್, ಯೋಗೇಶ್ ಮತ್ತು ಸವಿತಾ ಪಾಂಡವ್ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯ ಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಅಭಯ್ ವಾಘವಾಸೆ ಅವರ ಪೀಠ ಈ ತೀರ್ಪು ನೀಡಿದೆ. ಈ ಮೂವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಅಲ್ಲದೆ, ಅವರ ನಿರೀಕ್ಷಣಾ ಜಾಮೀನನ್ನು ನೆವಾಸಾ ಸೆಷನ್ಸ್ ನ್ಯಾಯಾಧೀಶರು ತಿರಸ್ಕರಿಸಿದರು. ಇದಾದ ಬಳಿಕ ಈ ಆರೋಪಿಗಳು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಮೂವರೂ ಹಲ್ಲೆ, ಹಿಂಬಾಲಿ ಸುವುದು, ಶಾಂತಿ ಕದಡುವ ಪ್ರಚೋದನೆ ಮತ್ತು ಕ್ರಿಮಿನಲ್ ಬೆದರಿಕೆಯ ಮೂಲಕ ಮಹಿಳೆಯ ನಮ್ರತೆಗೆ ಧಕ್ಕೆ ತಂದ ಆರೋಪಗಳನ್ನು ಎದುರಿಸುತ್ತಿದ್ದಾರೆ.

ಆರೋಪಿಗಳು ಮತ್ತು ದೂರುದಾರರು ನೆರೆಹೊರೆಯವರು ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ. ಯೋಗೇಶ್ ತನ್ನ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ತನ್ನನ್ನು ನೋಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಯೋಗೇಶ್ ತನ್ನ ಘನತೆಗೆ ಚ್ಯುತಿ ತರುವ ರೀತಿಯಲ್ಲಿ ತನ್ನನ್ನು ನೋಡುತ್ತಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.