Saturday, 23rd November 2024

ಬಿಎಸ್‌ಇ ಸೆನ್ಸೆಕ್ಸ್ 800 ಅಂಕಗಳಷ್ಟು ಕುಸಿತ

ನವದೆಹಲಿ: ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಸೋಮವಾರ ಭಾರೀ ಹಿನ್ನಡೆ ಕಂಡಿವೆ. ಬಿಎಸ್‌ಇ ಸೆನ್ಸೆಕ್ಸ್ 800 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿತ ಕಂಡಿದೆ. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ 16,200 ಗಡಿಗಿಂತ ಕೆಳಗಿಳಿದಿದೆ.

800 ಕಂಪನಿಗಳ ಷೇರುಗಳ ಮೌಲ್ಯ ಏರುಗತಿಗೆ ಹೋದರೆ ಅದಕ್ಕಿಂತ ಸುಮಾರು ಎರಡು ಪಟ್ಟು ಕಂಪನಿಗಳ ಷೇರುಗಳ ಮೌಲ್ಯ ಇಳಿಕೆ ಕಂಡಿದೆ.

ಅಮೆರಿಕದ ಆರ್ಥಿಕ ಹಿಂಜರಿತ ಸಮಸ್ಯೆಯು ಜಾಗತಿಕ ಷೇರುಪೇಟೆ ಅಲುಗಾಟಕ್ಕೆ ಪ್ರಮುಖ ಕಾರಣವಾಗಿದೆ ಎಂಬುದು ತಜ್ಞರ ಅನಿಸಿಕೆ. ಅಮೆರಿಕದ ಆರ್ಥಿಕ ಹಿನ್ನಡೆಗೆ ಕಾರಣವಾಗುತ್ತಿರುವ ಹಣದುಬ್ಬರ ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗದೇ ಇರುವ ಹಿನ್ನಲೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಕುಂದಿಸಿದೆ.

ಅಮೆರಿಕದ ಷೇರುಪೇಟೆ ಕುಸಿಯುತ್ತಿದ್ದರ ಪರಿಣಾಮ ಇತರೆಡೆಯೂ ಆಗಿದೆ. ಏಷ್ಯಾದ ಜಪಾನ್‌ನ ಷೇರುಪೇಟೆ ಸೂಚ್ಯಂಕಗಳು ಕಳೆಗಿಳಿದಿವೆ. ಭಾರತದ ಷೇರುಮಾರುಕಟ್ಟೆ ಇನ್ನೂ ಹೆಚ್ಚು ಕುಸಿತ ಕಂಡಿದೆ.

ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್ ಬ್ಯಾಂಕ್, ಟಾಟಾ ಸ್ಟೀಲ್, ಟೆಕ್ ಮಹೀಂದ್ರ, ಮಾರುತಿ, ಬಜಾಜ್, ರಿಲಾಯನ್ಸ್, ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಮಹೀಂದ್ರ ಅಂಡ್ ಮಹೀಂದ್ರ ಕಂಪನಿಗಳ ಷೇರುಗಳ ಮೌಲ್ಯ ಇಳಿಕೆಯಾಗಿದೆ. ನಿಫ್ಟಿಯಲ್ಲಿ ಹಿಂಡಾಲ್ಕೊ, ಜೆಎಸ್‌ ಡಬ್ಲ್ಯೂ ಸ್ಟೀಲ್ ಮತ್ತು ಟಾಟಾ ಮೋಟರ್ಸ್ ಕಂಪನಿಯ ಷೇರುಗಳು ಮಾತ್ರ ಏಳಿಗೆ ಕಂಡಿವೆ.

ರೂಪಾಯಿ ದಾಖಲೆ ಕುಸಿತ: ಭಾರತದ ಷೇರುಪೇಟೆ ಕುಸಿತದ ಜೊತೆಗೆ ಮತ್ತೊಂದು ಶಾಕ್ ಬಿದ್ದಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಮಟ್ಟಕ್ಕೆ ಕುಸಿದಿದೆ. ಪ್ರತೀ ಡಾಲರ್‌ಗೆ ರೂಪಾಯಿ ಮೌಲ್ಯ 77.40ಕ್ಕೆ ಇಳಿದಿದೆ. ಕಳೆದ ಶುಕ್ರವಾರ ಒಂದು ಡಾಲರ್‌ಗೆ 77.05 ರೂಪಾಯಿಯಂತೆ ವಹಿವಾಟು ಆಗಿತ್ತು.