Tuesday, 15th October 2024

ಬಜೆಟ್‌ ಅಧಿವೇಶನ ಇಂದೇ ಮುಕ್ತಾಯ ?

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನ ಶುಕ್ರವಾರದ ಬದಲು ಗುರುವಾರ (ಏ.7)ರಂದೇ ಮುಕ್ತಾಯವಾಗುವ ಸಾಧ್ಯತೆ ಇದೆ.

ಜ.31ರಂದು ಅಧಿವೇಶನ ಶುರುವಾಗಿತ್ತು. ಒಂದು ದಿನ ಮೊದಲೇ ಅಧಿವೇಶನ ಮುಂದೂಡುವ ಬಗ್ಗೆ ವಿವಿಧ ಪಕ್ಷಗಳ ಸದನ ನಾಯಕರ ಜತೆಗೆ ಲೋಕಸಭೆ ಮತ್ತು ರಾಜ್ಯಸಭೆ ಕಾರ್ಯಾಲಯಗಳ ಅಧಿಕಾರಿಗಳು ಮಾತುಕತೆ ಯಲ್ಲಿ ತೊಡಗಿದ್ದಾರೆ.

ಮುಂಗಾರು ಅಧಿವೇಶನದ ವೇಳೆಯೂ ಅವಧಿಗಿಂತ ಮುನ್ನವೇ ಮುಂದೂಡಿಕೆಯಾಗಿತ್ತು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಸಹಮತ ಮೂಡಿದ್ದ ರಿಂದ ಉದ್ದೇಶಿತ ಮಸೂದೆಗಳಿಗೆಲ್ಲ ಅನುಮೋದನೆ ಪಡೆದುಕೊಳ್ಳ ಲಾಗಿದೆ.

ಸಮೂಹ ವಿನಾಶಕ ಶಸ್ತ್ರಾಸ್ತ್ರಗಳಿಗೆ ವಿತ್ತೀಯ ನೆರವಿಗೆ ತಡೆ ನೀಡುವ ಮಸೂದೆಗೆ ಲೋಕಸಭೆಯಲ್ಲಿ ಸರ್ವಾನು ಮತದಿಂದ ಅನುಮೋದನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮಸೂದೆ ಅಂಗೀಕಾರದಿಂದ ದೇಶದ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಸರಕಾರದ ನಿಲುವಿಗೆ ಮತ್ತಷ್ಟು ಸಮರ್ಥನೆ ದೊರೆತಿದೆ. ಜತೆಗೆ ಸಮೂಹ ವಿನಾಶಕ ಶಸ್ತ್ರಾಸ್ತ್ರಗಳ ವಿರುದ್ಧ ಭಾರತ ಹೊಂದಿರುವ ನಿಲುವಿಗೂ ಜಗತ್ತಿನಲ್ಲಿ ಬೆಂಬಲ ಸಿಗಲಿದೆ ಎಂದಿದ್ದಾರೆ.

ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಶೀಘ್ರವೇ 4ಜಿ ತಂತ್ರಜ್ಞಾನ ಜಾರಿಗೊಳಿಸಲಿದೆ. ಗ್ರಾಹಕರ ಅನುಕೂಲಕ್ಕಾಗಿ 1.12 ಲಕ್ಷ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸಲಿದೆ ಎಂದು ದೂರಸಂಪರ್ಕ ಸಚಿವ ಅಶ್ವಿ‌ನಿ ವೈಷ್ಣವ್‌ ಲೋಕಸಭೆಗೆ ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ 2019ರಿಂದ ಈಚೆಗೆ ಭಯೋತ್ಪಾದಕರಿಂದ ನಾಲ್ವರು ಕಾಶ್ಮೀರಿ ಪಂಡಿತರೂ ಸೇರಿದಂತೆ 14 ಮಂದಿ ಹಿಂದೂಗಳು ಕೊಲ್ಲಲ್ಪಟ್ಟಿದ್ದಾರೆ ಎಂದು ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ನಿತ್ಯಾನಂದ ರಾಯ್‌ ರಾಜ್ಯಸಭೆಗೆ ತಿಳಿಸಿದ್ದಾರೆ.