Friday, 13th December 2024

ನಾಳೆಯಿಂದ ಸಂಸತ್‌ನಲ್ಲಿ ಬಜೆಟ್‌ ಅಧಿವೇಶನ ಮುಂದುವರಿಕೆ

ನವದೆಹಲಿ: ಸಂಸತ್‌ನ ಬಜೆಟ್‌ ಅಧಿವೇಶನದ ಮುಂದುವರಿದ ಭಾಗ ಸೋಮವಾರದಿಂದ ಆರಂಭವಾಗಲಿದೆ.

ಈ ಅಧಿವೇಶನದ ಅವಧಿಯಲ್ಲಿ ಸರ್ಕಾರ 2021-22ನೇ ಸಾಲಿನ ಅನುದಾನಕ್ಕಾಗಿ ವಿವಿಧ ಬೇಡಿಕೆಗಳನ್ನು ಹಣಕಾಸು ಮಸೂದೆ  ಯೊಂದಿಗೆ ಅಂಗೀಕರಿಸುವುದಕ್ಕೆ ಒತ್ತು ನೀಡಲಿದೆ. ಇದೇ ಅವಧಿಯಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ.

ಏಪ್ರಿಲ್‌ 8ಕ್ಕೆ ಮುಕ್ತಾಯವಾಗುವ ಅಧಿವೇಶನದಲ್ಲಿ ವಿವಿಧ ಮಸೂದೆಗಳನ್ನು ಮಂಡಿಸಿ, ಅಂಗೀಕಾರ ಪಡೆಯಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಸರ್ಕಾರ ಪಟ್ಟಿ ಮಾಡಿರುವ ಕೆಲವು ಮಸೂದೆಗಳಲ್ಲಿ, ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಮೂಲಸೌಕರ್ಯ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್ ಕುರಿತ ಮಸೂದೆ, ವಿದ್ಯುತ್ (ತಿದ್ದುಪಡಿ) ಮಸೂದೆ, ಕ್ರಿಪ್ಟೊ ಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ಮಸೂದೆಯ ನಿಯಂತ್ರಣ ಸೇರಿವೆ.

ಚುನಾವಣೆಯತ್ತ ಗಮನ ಹರಿಸುವ ಪ್ರಾದೇಶಿಕ ಪಕ್ಷಗಳ ಹಿರಿಯ ನಾಯಕರು ಉಭಯ ಸದನಗಳ ಅಧಿವೇಶನಕ್ಕೆ ಗೈರಾಗುವ ಸಾಧ್ಯತೆ ಹೆಚ್ಚಿದೆ.