Friday, 13th December 2024

ನಿರೀಕ್ಷಣಾ ಜಾಮೀನು ರದ್ದು: ಹೋರಾಟಗಾರ ಸಿವಿಕ್ ಚಂದ್ರನ್ ಶರಣು

ಕ್ಯಾಲಿಕಟ್: ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಬರಹಗಾರ ಹಾಗೂ ಹೋರಾಟ ಗಾರ ಸಿವಿಕ್ ಚಂದ್ರನ್ ಮಂಗಳವಾರ ಶರಣಾಗಿದ್ದಾರೆ.

ಈ ಹಿಂದೆ ಜಿಲ್ಲಾ ನ್ಯಾಯಾಲಯ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿತ್ತು. ತನಿಖಾಧಿಕಾರಿ ಎದುರು ಹಾಜರಾಗುವಂತೆ ಚಂದ್ರನ್‌ಗೆ ಹೈಕೋರ್ಟ್‌ ಸೂಚಿಸಿತ್ತು.

ಚಂದ್ರನ್ ಅವರು ವಕೀಲರೊಂದಿಗೆ ಡಿವೈಎಸ್ಪಿ ಕಚೇರಿಗೆ ಹಾಜರಾಗಿದ್ದರು. ಪ್ರಕ್ರಿಯೆ ಮುಗಿದ ನಂತರ ಕ್ಯಾಲಿಕಟ್‌ ನ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ವರದಿಯಾಗಿದೆ.

ದಲಿತ ಮಹಿಳೆಯೊಬ್ಬರು ಕಳೆದ ಏಪ್ರಿಲ್‌ನಲ್ಲಿ ಚಂದ್ರನ್‌ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರು ನೀಡಿದ್ದರು. ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿಯಲ್ಲೂ ಪ್ರಕರಣ ದಾಖಲಿಸಲಾಗಿತ್ತು.

ಎರಡು ತಿಂಗಳ ಹಿಂದೆ ಬೇರೆ ಬೇರೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಚಂದ್ರನ್‌ಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನು ಆದೇಶದಲ್ಲಿ ಸಂತ್ರಸ್ತೆಯ ಉಡುಪಿನ ಬಗ್ಗೆ ನ್ಯಾಯಾಧೀಶರು ಉಲ್ಲೇಖಿಸಿದ್ದರು.