Thursday, 3rd October 2024

ವಾಟ್ಸಾಪ್ ಚಾಟ್ಸ್’ಅನ್ನು ಸಾಕ್ಷಿಯೆಂದು ಪರಿಗಣಿಸಲಾಗುವುದಿಲ್ಲ: ಮುಂಬೈ ವಿಶೇಷ ನ್ಯಾಯಾಲಯ

ಮುಂಬೈ: ಕೇವಲ ವಾಟ್ಸಾಪ್ ಚಾಟ್ಸ್ ಸಾಕ್ಷಿಯಾಗುವುದಿಲ್ಲ ಎಂದು ಹಡಗಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ವಿಶೇಷ ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆಚಿತ್ ಕುಮಾರ್ ಅವರು ನಟ ಶಾರೂಖ್ ಖಾನ್ ಮಗ ಆರ್ಯನ್ ಖಾನ್ ಅವರಿಗೆ ಡ್ರಗ್ಸ್‌ ಪೂರೈಕೆ ಮಾಡಿದ್ದಾರೆ ಎಂಬುದನ್ನು ಕೇವಲ ವಾಟ್ಸಾಪ್ ಮಾತುಕತೆಗಳ ಆಧಾರದಲ್ಲಿ ಹೇಳಲು ಆಗುವುದಿಲ್ಲ. ಪ್ರಕರಣದಲ್ಲಿ ಮಾದಕ ದ್ರವ್ಯ ನಿಗ್ರಹ ದಳದ ದಾಖಲೆಗಳ ಸತ್ಯಾ ಸತ್ಯತೆಯ ಬಗ್ಗೆ ಪ್ರಶ್ನಿಸಿದ್ದು, ದಾಖಲೆಗಳನ್ನು ಸೃಷ್ಟಿಸಲಾಗಿದ್ದು, ಅವು ಅನುಮಾನಾ ಸ್ಪದವೆಂದು ತೋರುತ್ತಿದೆ ಎಂದು ನ್ಯಾಯಾಲಯ ಹೇಳಿದೆ.

ಹಡಗಿನಲ್ಲಿ ಡ್ರಗ್ಸ್‌ ಪತ್ತೆ ಪ್ರಕರಣದಲ್ಲಿ ಕೇವಲ ವಾಟ್ಸಾಪ್ ಮಾತುಕತೆಗಳು ಮಾತ್ರ ಪ್ರಮುಖ ಆರೋಪಿಗಳಾದ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತು ಅರ್ಬಾಜ್ ಮರ್ಚೆಂಟ್ ಅವರಿಗೆ ಆರೋಪಿ ಆಚಿತ್ ಕುಮಾರ್ ಡ್ರಗ್ಸ್‌ ಪೂರೈಕೆ ಮಾಡಿದ್ದ ಎಂಬುದಕ್ಕೆ ಸಾಕ್ಷಿಯಾಗುವುದಿಲ್ಲ. ಆದ್ದರಿಂದ ಅವರು ಜಾಮೀನಿಗೆ ಅರ್ಹವಾಗಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆರ್ಯನ್ ಖಾನ್ ಮತ್ತು ಕುಮಾರ್ ನಡುವೆ ಪಿತೂರಿ ನಡೆದಿದೆ ಎಂದು ತೋರಿಸಲು ಯಾವುದೇ ದಾಖಲೆಗಳಿಲ್ಲ. ಆರ್ಯನ್ ಖಾನ್‌ಗೆ ಜಾಮೀನು ನೀಡಿದರೆ, ಸಮಾನತೆ ಆಧಾರದಲ್ಲಿ ಆಚಿತ್ ಕುಮಾರ್ ಅವರನ್ನು ಬಿಡುಗಡೆ ಮಾಡಬಹುದು ಎಂದೂ ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಸಮುದ್ರದಲ್ಲಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಡ್ರಗ್ಸ್ ಪತ್ತೆಯಾಗಿ ಎನ್ ಸಿಬಿ ಅಧಿಕಾರಿಗಳಿಂದ ಕಳೆದ ಅಕ್ಟೋಬರ್ 2ರಂದು ತಡರಾತ್ರಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಗೆ ಕೊನೆಗೂ ಜೈಲುವಾಸದಿಂದ ಮುಕ್ತಿ ಸಿಕ್ಕಿದೆ.