Saturday, 14th December 2024

ಕಾರು ಪಾರ್ಕ್​ ಮಾಡುತ್ತಿದ್ದ ವೇಳೆ ಸ್ಫೋಟ: ಯುವಕನ ಸಾವು

ಆಲಪ್ಪುಳ: ಮನೆಯ ಮುಂಭಾಗ ಕಾರು ಪಾರ್ಕ್​ ಮಾಡುತ್ತಿದ್ದ ವೇಳೆ ಕಾರು ಸ್ಫೋಟಗೊಂಡು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಭಾನುವಾರ ತಡರಾತ್ರಿ ಆಲಪ್ಪುಳ ಜಿಲ್ಲೆಯ ಮಾವೆಲಿಕ್ಕಾರದಲ್ಲಿ ನಡೆದಿದೆ.

ಮೃತರನ್ನು ಆಲಪ್ಪುಳದ ಕರಜ್ಮಾ ನಿವಾಸಿ ಕಿನ್ನೆತುಂ ಕಟ್ಟಿಲ್​ ಕೃಷ್ಣ ಪ್ರಕಾಶ್​ (35) ಎಂದು ಗುರುತಿಸಲಾಗಿದೆ.

ಮೃತ ಕೃಷ್ಣ ಪ್ರಕಾಶ್ ಅವರು ಮನೆಯ ಮುಂಭಾಗದಲ್ಲಿ ಕಾರು ಪಾರ್ಕ್​ ಮಾಡಲು ಪ್ರಯತ್ನಿಸುತ್ತಿದ್ದರು. ಆ ವೇಳೆ, ಏಕಾಏಕಿ ಕಾರಿಗೆ ಬೆಂಕಿ ತಗುಲಿ ದೊಡ್ಡ ಶಬ್ಧದೊಂದಿಗೆ ಕಾರು ಸ್ಫೋಟಗೊಂಡಿದೆ. ಮಾವೇಲಿಕ್ಕರ ಬಾಲಕಿಯರ ಶಾಲೆಯ ಬಳಿ ಕಂಪ್ಯೂಟರ್ ಸಂಸ್ಥೆ ನಡೆಸುತ್ತಿದ್ದ ಕೃಷ್ಣ ಪ್ರಕಾಶ್ ಅವರು​ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪುಲಿಮೂಡ್​ ಜ್ಯೋತಿ ಅವರ ಮನೆಯಲ್ಲಿ ಈ ದುರ್ಘಟನೆ ನಡೆದಿದೆ.

ಮನೆಯಿಂದ ಹೊರ ಹೋಗಿದ್ದ ಕೃಷ್ಣ ಪ್ರಕಾಶ್​ ಅವರು ಪ್ರಯಾಣ ಮುಗಿಸಿ, ತಡರಾತ್ರಿ ಮನೆಗೆ ಹಿಂದಿರುಗಿದ್ದರು. ಬಂದವರೇ ಮನೆಯ ಮುಂಭಾಗ ಕಾರು ಪಾರ್ಕಿಂಗ್​ ಜಾಗದಲ್ಲಿ ಕಾರು ಪಾರ್ಕ್​ ಮಾಡಲು ಪ್ರಯತ್ನಿಸುತ್ತಿದ್ದರು. ಈ ವೇಳೆ, ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡು, ದೊಡ್ಡ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಭಾರೀ ಶಬ್ದ ಕೇಳಿದ ಕೂಡಲೇ ಸ್ಥಳೀಯರು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ, ಬೆಂಕಿ ನಂದಿಸುವ ವೇಳೆಗಾಗಲೇ ಡ್ರೈವರ್​ ಸೀಟ್​ನಲ್ಲಿದ್ದ ಕೃಷ್ಣ ಪ್ರಕಾಶ್​ ಅವರು ಸಾವನ್ನಪ್ಪಿದ್ದರು.