Wednesday, 11th December 2024

ಭಾರತ್ ಜೋಡೋ ಯಾತ್ರೆ ವೇಳೆ ‘ಪಾಕಿಸ್ತಾನ ಪರ’ ಘೋಷಣೆ: ಪ್ರಕರಣ ದಾಖಲು

ಧ್ಯಪ್ರದೇಶ: ಭಾರತ್ ಜೋಡೋ ಯಾತ್ರೆಯ ವೇಳೆ ‘ಪಾಕಿಸ್ತಾನ ಪರ’ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಮಧ್ಯ ಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪಿಯೂಷ್ ಬಾಬೆಲೆ ಮತ್ತು ಐಟಿ ಮುಖ್ಯಸ್ಥ ಅಭಯ್ ತಿವಾರಿ ವಿರುದ್ಧ ಬಿಜೆಪಿ ನಾಯಕರು ಪ್ರಕರಣ ದಾಖಲಿಸಿದ್ದಾರೆ.

ಪಕ್ಷದ ರಾಜ್ಯ ವಕ್ತಾರ ಪಂಕಜ್ ಚತುರ್ವೇದಿ ಮತ್ತು ರಾಜ್ಯ ಸಹ ಮಾಧ್ಯಮ ಉಸ್ತುವಾರಿ ನರೇಂದ್ರ ಶಿವಾಜಿ ಪಟೇಲ್ ಅವರು ನೀಡಿದ ದೂರಿನಲ್ಲಿ, ಕಾಂಗ್ರೆಸ್‌ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಮಲ್ ನಾಥ್ ಸೇರಿದಂತೆ ಇಡೀ ಕಾಂಗ್ರೆಸ್ ಪಕ್ಷವು ಭಾರತ್ ಜೋಡೋ ಯಾತ್ರೆಯ ನೆಪದಲ್ಲಿ ದೇಶ ವಿರೋಧಿ ಚಟುವಟಿಕೆಗಳನ್ನು ನಡೆಸಿದೆ ಎಂದು ಆರೋಪಿಸಲಾಗಿದೆ.

ಯಾತ್ರೆಯಲ್ಲಿ ದೇಶದ ಶಾಂತಿ ಕದಡಲು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಗಳನ್ನು ಕೂಗಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.

ನ.25 ರಂದು ಮಧ್ಯಪ್ರದೇಶದ ಬಿಜೆಪಿ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್, ತಮ್ಮ ಅಧಿಕೃತ ಹ್ಯಾಂಡಲ್‌ನಿಂದ ಮಧ್ಯಪ್ರದೇಶದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಕಾಂಗ್ರೆಸ್ಸಿಗರು ಪಾಕಿಸ್ತಾನದ ಪರ ಘೋಷಣೆಗಳನ್ನು ಎತ್ತಿದ್ದಾರೆ ಎಂದು ಹೇಳಲಾದ ವೀಡಿಯೊವನ್ನು ಟ್ವೀಟ್ ಮಾಡಿದ್ದರು.

ನವೆಂಬರ್ 26 ರಂದು, ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದವರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆಗಳನ್ನು ಕೂಗಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸು ತ್ತಿದ್ದಾರೆ.