Saturday, 14th December 2024

Centre renames Port Blair : ಅಂಡಮಾನ್‌ನ ಪೋರ್ಟ್‌ ಬ್ಲೇರ್ ಇನ್ನು ಶ್ರೀ ವಿಜಯಪುರಂ; ಹೆಸರು ಬದಲಿಸಿದ ಕೇಂದ್ರ ಸರ್ಕಾರ

Centre renames Port Blair

ಬೆಂಗಳೂರು: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ರಾಜಧಾನಿ ಪೋರ್ಟ್ ಬ್ಲೇರ್ ಅನ್ನು “ಶ್ರೀ ವಿಜಯ ಪುರಂ” ಎಂದು ಕೇಂದ್ರ ಸರ್ಕಾರ (Centre renames Port Blair) ಮರುನಾಮಕರಣ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶುಕ್ರವಾರ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಪ್ರಕಾರ ನಮ್ಮ ದೇಶವನ್ನು ವಸಾಹತುಶಾಹಿ ವ್ಯವಸ್ಥೆಯಿಂದ ಮುಕ್ತಗೊಳಿಸಲು ಇಂದು ನಾವು ಪೋರ್ಟ್ ಬ್ಲೇರ್ ಅನ್ನು “ಶ್ರೀ ವಿಜಯ ಪುರಂ” ಎಂದು ಮರುನಾಮಕರಣ ಮಾಡಲು ನಿರ್ಧರಿಸಿದ್ದೇವೆ ಎಂದು ಅವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಹಿಂದಿನ ಹೆಸರು ವಸಾಹತುಶಾಹಿ ಪರಂಪರೆ ಹೊಂದಿದ್ದರೆ, “ಶ್ರೀ ವಿಜಯ ಪುರಂ’ ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಸಾಧಿಸಿದ ವಿಜಯ ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ವಿಶಿಷ್ಟ ಪಾತ್ರವನ್ನು ಸಂಕೇತಿಸುತ್ತದೆ ಎಂದು ಗೃಹ ಸಚಿವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಹೀಗಾಗಿ ಶ್ರೀ ವಿಜಯ ಪುರಂ ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ನಗರವಾಗಿರಲಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ನಮ್ಮ ಸ್ವಾತಂತ್ರ್ಯ ಹೋರಾಟ ಮತ್ತು ಇತಿಹಾಸದಲ್ಲಿ ಉತ್ತಮ ಸ್ಥಾನ ಮಾನ ಹೊಂದಿದೆ. ಒಂದು ಕಾಲದಲ್ಲಿ ಚೋಳ ಸಾಮ್ರಾಜ್ಯದ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸಿದ ದ್ವೀಪ ಪ್ರದೇಶವು ಇಂದು ನಮ್ಮ ಕಾರ್ಯತಂತ್ರ ಮತ್ತು ಅಭಿವೃದ್ಧಿ ಆಕಾಂಕ್ಷೆಗಳಿಗೆ ನಿರ್ಣಾಯಕ ನೆಲೆಯಾಗಲು ಸಜ್ಜಾಗಿದೆ” ಎಂದು ಅವರು ಹೇಳಿದ್ದಾರೆ.

“ನೇತಾಜಿ ಸುಭಾಷ್ ಚಂದ್ರ ಬೋಸ್ ಜಿ ಅವರು ನಮ್ಮ ಧ್ವಜವನ್ನು ಮೊದಲ ಬಾರಿಗೆ ಹಾರಿಸಿದ ಸ್ಥಳ ಮತ್ತು ವೀರ್ ಸಾವರ್ಕರ್ ಮತ್ತು ಇತರ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ರಾಷ್ಟ್ರಕ್ಕಾಗಿ ಹೋರಾಟದಲ್ಲಿ ಶಿಕ್ಷೆ ಅನುಭವಿಸಿದ ಸೆಲ್ಯುಲಾರ್ ಜೈಲು ಕೂಡ ಇಲ್ಲೇ ಇದೆ,” ಎಂದು ಶಾ ಹೇಳಿದ್ದಾರೆ.

ಗ್ರೇಟ್ ನಿಕೋಬಾರ್ ಯೋಜನೆ

ನಿಕೋಬಾರ್ ದ್ವೀಪವು ಕೇಂದ್ರದ 72,000 ಕೋಟಿ ರೂ.ಗಳ ಯೋಜನೆಯ ಕಾರಣಕ್ಕೆ ಸುದ್ದಿಯಲ್ಲಿದೆ. ಈ ಯೋಜನೆಯಿಂದಾಗಿ ಸ್ಥಳೀಯ ಶೋಂಪೆನ್ ಬುಡಕಟ್ಟು ಜನಾಂಗವನ್ನು ಸ್ಥಳಾಂತರಗೊಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: SC verdict on Kejriwal bail: ಸಿಎಂ ಕಚೇರಿ ಪ್ರವೇಶಿಸುವಂತಿಲ್ಲ- ಕೇಜ್ರಿವಾಲ್‌ಗೆ ಕೋರ್ಟ್‌ ವಿಧಿಸಿರುವ ಆ ಐದು ಷರತ್ತುಗಳೇನು?

ನಿಕೋಬಾರ್ ದ್ವೀಪದಲ್ಲಿ 244 ರಷ್ಟೇ ಇರುವ ಶೋಂಪೆನ್ ಬುಡುಕಟ್ಟು ಸಮುದಾಯವು ಮುಖ್ಯವಾಗಿ ನಗರ ಸಂಪರ್ಕವಿಲ್ಲದ ಅಲೆಮಾರಿ ಬೇಟೆಗಾರರು. 2004 ರ ಸುನಾಮಿಯ ನಂತರ ಅವರು ಈಗಾಗಲೇ ಕಾಡುಗಳೊಳಗೆ ಸ್ಥಳಾಂತರಗೊಂಡಿದ್ದಾರೆ. ಹೀಗಾಗಿ ಶೋಂಪೆನ್‌ಗಳು ವಾಸಿಸದ ಪ್ರದೇಶಕ್ಕೆ ಈ ಯೋಜನೆ ಪ್ರಸ್ತಾಪಿಸಲಾಗಿದೆ ಎಂದು ಸ್ಥಳೀಯ ಆಡಳಿತದ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಾಕ್ರಮ್ ದಿವಸ್ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶದ 21 ದೊಡ್ಡ ಅನಾಮಧೇಯ ದ್ವೀಪಗಳಿಗೆ ಪರಮ ವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಇಟ್ಟಿದ್ದರು. ಈ ಹಿಂದೆ ರಾಸ್ ದ್ವೀಪಗಳು ಎಂದು ಕರೆತ್ತಿದ್ದ ದ್ವೀಪಕ್ಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪ ಎಂದು ಹೆಸರಿಲಾಗಿದೆ. ಅಲ್ಲಿ ನೇತಾಜಿಗೆ ಸಮರ್ಪಿತವಾದ ರಾಷ್ಟ್ರೀಯ ಸ್ಮಾರಕ ನಿರ್ಮಾಣಗೊಳ್ಳುತ್ತಿದೆ.