Saturday, 14th December 2024

ಚಂಡೀಗಢದ ಮೇಯರ್ ಚುನಾವಣೆ: ಒಂದು ಮತದಿಂದ ಗೆದ್ದ ಬಿಜೆಪಿ

ವದೆಹಲಿ: ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಕೇವಲ 1 ಮತಗಳ ಅಂತರದಿಂದ ಜಯಗಳಿಸಿದೆ. ಬಿಜೆಪಿ ಒಟ್ಟು 15 ಮತಗಳನ್ನು ಪಡೆದರೆ, ಎಎಪಿ 14 ಮತಗಳನ್ನು ಗಳಿಸಿದೆ.

ಬಿಜೆಪಿ ಅಭ್ಯರ್ಥಿ ಅನುಪ್ ಗುಪ್ತಾ ಚಂಡೀಗಢದ ನೂತನ ಮೇಯರ್ ಆಗಲಿದ್ದಾರೆ. ಚಂಡೀಗಢದ ಮೇಯರ್ ಚುನಾವಣೆಗೆ ಮಂಗಳವಾರ ಮುನ್ಸಿಪಲ್ ಕಾರ್ಪೊರೇಷನ್‌ನ ಅಸೆಂಬ್ಲಿ ಹಾಲ್‌ನಲ್ಲಿ ಮತದಾನ ಆರಂಭ ಗೊಂಡಿದ್ದು, ಬಿಜೆಪಿ ಮತ್ತು ಎಎಪಿ ಪ್ರಮುಖ ಸ್ಥಾನಕ್ಕಾಗಿ ಸ್ಪರ್ಧೆ ನಡೆಸಿದ್ದವು.

ಇಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ತಲಾ 14 ಕೌನ್ಸಿಲರ್‌ಗಳನ್ನು ಹೊಂದಿದೆ.

ಬಿಜೆಪಿಯು ಅನುಪ್ ಗುಪ್ತಾ ಅವರನ್ನು ಮೇಯರ್ ಅಭ್ಯರ್ಥಿ ಎಂದು ಘೋಷಿಸಿದರೆ, ಆಮ್ ಆದ್ಮಿ ಪಕ್ಷವು ಜಸ್ವೀರ್ ಸಿಂಗ್ ಲಡ್ಡಿಯನ್ನು ತನ್ನ ಅಭ್ಯರ್ಥಿ ಎಂದು ಘೋಷಿಸಿತ್ತು. ಕಳೆದ ಬಾರಿಯೂ ಮೇಯರ್ ಆಯ್ಕೆಗೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ನಡುವೆ ಸಾಕಷ್ಟು ಚರ್ಚೆ ನಡೆದಿತ್ತು. ಆದರೆ ಬಿಜೆಪಿಯ ಸರಬ್ಜಿತ್ ಕೌರ್ ಒಂದು ಮತದ ಅಂತರದಿಂದ ಮೇಯರ್ ಆಗಿ ಆಯ್ಕೆಯಾಗಿದ್ದರು.

ಮಂಗಳವಾರ ನಡೆದ ಚಂಡೀಗಢದ ಮೇಯರ್ ಚುನಾವಣೆಯಲ್ಲಿ ಎಎಪಿ ವಿರುದ್ಧ ತೀವ್ರ ಪೈಪೋಟಿ ನಡೆಸಿ ಬಿಜೆಪಿಯ ಅನುಪ್ ಗುಪ್ತಾ ಗೆಲುವು ಸಾಧಿಸಿದ್ದಾರೆ.