Thursday, 12th December 2024

Chennai Horror: ಸಿಗರೇಟ್‌, ಬಿಸಿ ಕಬ್ಬಿಣದಿಂದ ಸುಟ್ಟು ಚಿತ್ರಹಿಂಸೆ; ಮನೆ ಕೆಲಸದ ಬಾಲಕಿಯ ಶವ ಟಾಯ್ಲೆಟ್‌ನಲ್ಲಿ ಪತ್ತೆ

chennai horror

ಚೆನ್ನೈ: ಅಪ್ರಾಪ್ತರನ್ನು ಕೆಲಸಕ್ಕಿಟ್ಟುಕೊಳ್ಳುವುದೇ ಕಾನೂನು ಪ್ರಕಾರ ಅಪರಾಧ. ಹಾಗಿದ್ದರೂ ಅಪ್ರಾಪ್ತ ಬಾಲಕಿಯನ್ನು ಮನೆಕೆಲಸಕ್ಕಿಟ್ಟುಕೊಂಡಿದ್ದು ಮಾತ್ರವಲ್ಲದೇ ಆಕೆಗೆ ಕೊಡಬಾರದ ಚಿತ್ರಹಿಂಸೆ ಕೊಟ್ಟು ಬರ್ಬರವಾಗಿ ಹತ್ಯೆಗೈದಿರುವ ಭೀಕರ ಘಟನೆ ತಮಿಳುನಾಡಿನಲ್ಲಿ(Chennai Horror) ನಡೆದಿದೆ. ಚೆನ್ನೈನಲ್ಲಿ 15 ವರ್ಷದ ಮನೆ ಕೆಲಸದಾಕೆಗೆ ಚಿತ್ರಹಿಂಸೆ ನೀಡಿ ಹತ್ಯೆಗೈದ ಆರೋಪದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ನಾಲ್ವರನ್ನು ಕೂಡ ಅರೆಸ್ಟ್‌ ಮಾಡಲಾಗಿದೆ.

ತನಿಖಾಧಿಕಾರಿಗಳ ಪ್ರಕಾರ, ಅಮಿಂಜಿಕರೈ ಪ್ರದೇಶದ ಮೆಹ್ತಾ ನಗರದಲ್ಲಿರುವ ಫ್ಲಾಟ್‌ವೊಂದರ ಶೌಚಾಲಯದಲ್ಲಿ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾಗಿದೆ. ಆಕೆ ಸಾವಿಗೂ ಮುನ್ನ ಆಕೆಗೆ ಕಬ್ಬಿಣ ಸಲಾಕೆಯನ್ನು ಬಿಸಿ ಮಾಡಿ ಬರೆ ಎಳೆದು, ಸಿಗರೇಟ್‌ನಿಂದ ಸುಟ್ಟು ಚಿತ್ರಹಿಂಸೆ ನೀಡಲಾಗಿತ್ತು ಎಂಬುದು ತನಿಖೆ ವೇಳೆ ಬಯಲಾಗಿದೆ.

ಇನ್ನು ಆರೋಪಿಗಳಾದ ಮೊಹಮ್ಮದ್ ನಿಶಾದ್ ಮತ್ತು ನಾಸಿಯಾ ಎಂಬ ದಂಪತಿಗಳು ಬಾಲಕಿಯ ಶವವನ್ನು ತಮ್ಮ ಶೌಚಾಲಯದಲ್ಲಿ ಬಿಟ್ಟು ಪುರುಷನ ಸಹೋದರಿಯ ಮನೆಗೆ ಪರಾರಿಯಾಗಿದ್ದರು. ಸಾವಿನ ಬಗ್ಗೆ ಅವರ ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂತ್ರಸ್ತೆಯ ತಾಯಿ ತಂಜಾವೂರು ಜಿಲ್ಲೆಯ ನಿವಾಸಿಯಾಗಿದ್ದು, ಪತಿಯನ್ನು ಕಳೆದುಕೊಂಡು ಬಹಳ ಕಷ್ಟದ ಜೀವನ ಸಾಗಿಸುತ್ತಿದ್ದರು. ಬಾಲಕಿಯ ಸಾವಿಗೆ ಕಾರಣವನ್ನು ತಿಳಿಯಲು ಕಿಲ್ಪಾಕ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮರಣೋತ್ತರ ಪರೀಕ್ಷೆಯ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ 60 ವರ್ಷದ ಮುಸ್ಲಿಂ ವ್ಯಕ್ತಿ ನಿಸಾರ್ ಖುರೇಷಿ ಎಂಬಾತ ಅತ್ಯಾಚಾರ ಮಾಡಿರುವ ಘಟನೆ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ನಡೆದಿತ್ತು. ಸ್ಥಳೀಯ ಹಿಂದೂಗಳು ಆರೋಪಿ ನಿಸಾರ್ ಖುರೇಷಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಘಟನೆಯಿಂದಾಗಿ ಈ ಪ್ರದೇಶದಲ್ಲಿ ಕೋಮು ಪರಿಸ್ಥಿತಿ ಉಂಟಾಗಿತ್ತು.

ಅಕ್ಟೋಬರ್ 3 ರಂದು ಆರೋಪಿ ನಿಸಾರ್ ಖುರೇಷಿ 9 ವರ್ಷದ ಬಾಲಕಿಯನ್ನು ಗಾಂಧಿ ಆದರ್ಶ ವಿದ್ಯಾಲಯದ ಬಳಿಯ ನಿರ್ಜನ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಾಲಕಿ ಅಳುತ್ತಾ ಮನೆಗೆ ತಲುಪಿ ನಿಸಾರ್ ಖುರೇಷಿಯ ಕೃತ್ಯದ ಬಗ್ಗೆ ತನ್ನ ಕುಟುಂಬಕ್ಕೆ ಮಾಹಿತಿ ನೀಡಿದ್ದಾಳೆ. ಅಪರಾಧದ ಬಗ್ಗೆ ತಿಳಿದ ನಂತರ, ಸಂತ್ರಸ್ತೆಯ ಕುಟುಂಬವು ಧೆಬರುವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ದೂರಿನ ಆಧಾರದ ಮೇಲೆ ಪೊಲೀಸರು ನಿಸಾರ್ ಖುರೇಷಿ ವಿರುದ್ಧ ಪೋಕ್ಸೊ ಕಾಯ್ದೆಯ ಬಿಎನ್ಎಸ್ ಸೆಕ್ಷನ್ 65 (2) ಮತ್ತು 56 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.ಅಪ್ರಾಪ್ತ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Kerala High Court : ಅಪ್ರಾಪ್ತ ವಯಸ್ಸಿನವರ ಎದುರು ಲೈಂಗಿಕ ಕ್ರಿಯೆ ನಡೆಸುವುದು ಲೈಂಗಿಕ ಕಿರುಕುಳ ಎಂದ ಹೈಕೋರ್ಟ್‌