Wednesday, 11th December 2024

ಕಳ್ಳಬಟ್ಟಿ ದುರಂತ: ಮೃತರ ಸಂಖ್ಯೆ 47ಕ್ಕೆ ಏರಿಕೆ

ಚೆನ್ನೈ: ಕರುಣಾಪುರಂನಲ್ಲಿ ನಡೆದ ಕಳ್ಳಬಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 47ಕ್ಕೆ ಏರಿದೆ ಎಂದು ತಮಿಳುನಾಡು ಸರ್ಕಾರ ಶುಕ್ರವಾರ ತಿಳಿಸಿದೆ.

ಗುರುವಾರದವರೆಗೆ ಮೃತಪಟ್ಟ 29 ಜನರ ಪಾರ್ಥಿವ ಶರೀರವನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಕಲ್ಲಕುರಿಚ್ಚಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಘಟನೆ ಬಳಿಕ ಒಟ್ಟು 165 ಜನರನ್ನು ಚಿಕಿತ್ಸೆಗಾಗಿ ಕಲ್ಲಕುರಿಚಿ, ಜಿಪ್ಮರ್, ಸೇಲಂ ಮತ್ತು ಮುಂಡಿಯಂಬಕ್ಕಂ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿತ್ತು. ಅವರಲ್ಲಿ ಇದುವರೆಗೆ 47 ಮಂದಿ ಸಾವಿಗೀಡಾಗಿದ್ದು, ಚಿಕಿತ್ಸೆ ಪಡೆಯುತ್ತಿರುವ 118 ಮಂದಿಯಲ್ಲಿ 30 ಜನರ ಸ್ಥಿತಿ ಗಂಭೀರವಾಗಿದೆ. ಮೂವರು ಚೇತರಿಸಿಕೊಂಡಿ ದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಲು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತೀವ್ರ ಕಾರ್ಯಾಚರಣೆ ನಡೆಸುವಂತೆ ತಿಳಿಸಲಾಗಿದೆ. ವಿಷ ಪೂರಿತ ಮದ್ಯ ಸೇವಿಸಿದವರು ಸ್ವಯಂ ಪ್ರೇರಿತವಾಗಿ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ ಎಂದೂ ಅವರು ಮನವಿ ಮಾಡಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಮೃತರ ಕುಟುಂಬದ ಸದಸ್ಯರಿಗೆ ತಲಾ ₹10 ಲಕ್ಷ, ಚಿಕಿತ್ಸೆ ಪಡೆಯುತ್ತಿರುವವರಿಗೆ ₹50 ಸಾವಿರ ಆರ್ಥಿಕ ನೆರವು ನೀಡಲಾಗುವುದು ಎಂದು ಸ್ಟಾಲಿನ್ ಹೇಳಿದ್ದಾರೆ.