Friday, 13th December 2024

ಛತ್ತೀಸ್‌ಗಢ ಚುನಾವಣೆ: ಕಣದಲ್ಲಿ 46 ಕೋಟ್ಯಧಿಪತಿಗಳು

ರಾಯ್‌ಪುರ: ಛತ್ತೀಸ್‌ಗಢ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ 223 ಅಭ್ಯರ್ಥಿಗಳ ಪೈಕಿ 46 ಕೋಟ್ಯಧಿಪತಿಗಳು ಕಣದಲ್ಲಿದ್ದಾರೆ.

ಬಡ ಪಕ್ಷ ಎಂದು ಗುರುತಿಸಿಕೊಂಡಿರುವ ಆಮ್ ಆದ್ಮಿಯ ಅಭ್ಯರ್ಥಿಯೊಬ್ಬರು ರಾಜ್ಯದಲ್ಲಿಯೇ ಅತಿ ಸಿರಿವಂತ ಅಭ್ಯರ್ಥಿಯಾಗಿದ್ದಾರೆ. ಇನ್ನಿಬ್ಬರು ಅಭ್ಯರ್ಥಿಗಳು ತಮ್ಮ ಬಳಿ ಆಸ್ತಿಯೇ ಇಲ್ಲ ಎಂದು ಘೋಷಿಸಿದ್ದಾರೆ.

ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ಛತ್ತೀಸ್‌ಗಢ ಎಲೆಕ್ಷನ್ ವಾಚ್‌ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್​ಗಳ ಆಧಾರದ ಮೇಲೆ ಸಮೀಕ್ಷೆ ನಡೆಸಿದ್ದು, ಮೊದಲ ಹಂತದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ 1.34 ಕೋಟಿ ರೂಪಾಯಿ ಇದೆ ಎಂದು ಹೇಳಿದೆ.

ಒಟ್ಟು 90 ವಿಧಾನಸಭಾ ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ನವೆಂಬರ್ 7 ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಉಳಿದ 70 ಕ್ಷೇತ್ರಗಳಿಗೆ ನವೆಂಬರ್ 17 ರಂದು ಮತದಾನ ನಡೆಯಲಿದೆ. ಈ ಪೈಕಿ ಅತಿ ಹೆಚ್ಚು ಘೋಷಿತ ಆಸ್ತಿ ಹೊಂದಿರುವ ಮೊದಲ ಮೂವರು ಅಭ್ಯರ್ಥಿಗಳೆಂದರೆ ಕವರ್ಧಾ ಕ್ಷೇತ್ರದಿಂದ ಸ್ಪರ್ಧಿಸಿರುವ, ರಾಜವಂಶಸ್ಥರಾದ ಎಎಪಿಯ ಖಡ್ಗರಾಜ್ ಸಿಂಗ್  ಬರೋಬ್ಬರಿ 40 ಕೋಟಿ ರೂ.ಗೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ. ನಂತರದಲ್ಲಿ ಬಿಜೆಪಿಯ ಭಾವನಾ ಬೋಹ್ರಾ (ಪಾಂಡರಿಯಾ ಕ್ಷೇತ್ರ) 33 ಕೋಟಿಗೂ ಹೆಚ್ಚು, ಕಾಂಗ್ರೆಸ್‌ನ ಜತೀನ್ ಜೈಸ್ವಾಲ್ (ಜಗದಲ್‌ಪುರ) 16 ಕೋಟಿ ಗೂ ಅಧಿಕ ಮೌಲ್ಯದ ಆಸ್ತಿ ಘೋಷಿಸಿದ್ದಾರೆ.

ಕಡಿಮೆ ಆಸ್ತಿ ಹೊಂದಿರುವ ಮೂವರು ಅಭ್ಯರ್ಥಿಗಳೆಂದರೆ ಡೊಂಗರ್‌ಗಢ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾದ ಹೇಮ್ ಕುಮಾರ್ ಸತ್ನಾಮಿ ಕೇವಲ 8 ಸಾವಿರ ರೂಪಾಯಿ ಘೋಷಿಸಿದ್ದರೆ, ಅಂತಗಢ ಕ್ಷೇತ್ರದ ಸ್ಪರ್ಧಿ ಯಾದ ಭಾರತೀಯ ಶಕ್ತಿ ಚೇತನ ಪಕ್ಷದ ನರಹರ್ ದಿಯೋ ಗಾವ್ಡೆ ಅವರು 10 ಸಾವಿರ, ರಿಪಬ್ಲಿಕನ್ ಪಕ್ಷದ (ಖೋರ್ಪಿಯಾ) ರಾಜನಂದಗಾಂವ್‌ನ ಅಭ್ಯರ್ಥಿ ಪ್ರತಿಮಾ ಅವರು ಕೂಡ 10 ಸಾವಿರ ರೂಪಾಯಿ ಇದೆ ಎಂದು ಅಫಿಡವಿಟ್​ನಲ್ಲಿ ನಮೂದಿಸಿದ್ದಾರೆ.