ನವದೆಹಲಿ: ಇದೇ ಅ.4 ರಂದು ಸೋಮವಾರ ರೋಂ ನಲ್ಲಿ ಹವಾಮಾನ ವೈಪರೀತ್ಯ ಕುರಿತು (Climate Change) ಶೃಂಗ ಸಭೆ ನಡೆಯಲಿದೆ.
ಕಳೆದ ಜನವರಿ ತಿಂಗಳಿಂದ ಇದರ ಸಿದ್ಧತೆಗಳು ನಡೆಯುತ್ತಾ ಬಂದಿವೆ. ಜಗತ್ತಿನಾದ್ಯಂತ ಅನೇಕ ದೇಶಗಳಿಂದ ಪ್ರಮುಖ ಧರ್ಮಗುರುಗಳು ಮತ್ತು ವಿಜ್ಞಾನಿ ಗಳನ್ನು ಆಹ್ವಾನಿಸಲಾಗಿದೆ.
ಇದೇ ವರ್ಷ ಸ್ಕಾಂಟ್ ಲ್ಯಾಂಡಿನ ಗ್ಲಾಸ್ಗೋದಲ್ಲಿ ಅಕ್ಟೋಬರ್ 31ರಿಂದ ನವಂಬರ್ 12 ರವರೆಗೆ ನಡೆಯಲಿರುವ ವಿಶ್ವರಾಷ್ಟ್ರಸಂಸ್ಢೆಯ 26 ನೆಯ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಪೂರಕವಾಗಿ ನಡೆಯಲಿರುವ ಈ ಶೃಂಗ ಸಭೆಯನ್ನು ಆಯೋಜಿಸಲು ಪ್ರಮುಖ ಪಾತ್ರ ವಹಿಸಿರುವವರು ಕ್ರೈಸ್ತ ಧರ್ಮಗುರುಗಳಾದ ಪೋಪ್ ಫ್ರಾನ್ಸಿಸ್ ರವರು. ಅವರು ತಮ್ಮ ರಾಯಭಾರಿಗಳ ಮುಖಾಂತರ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರನ್ನು ಆಹ್ವಾನಿಸಿರುತ್ತಾರೆ. ತರಳಬಾಳು ಶ್ರೀಗಳವರು ಇದುವರೆಗೆ ಅಂತರಜಾಲದಲ್ಲಿ ನಡೆದ ಅಂತಾರಾಷ್ಟ್ರೀಯ ವರ್ಚುಯಲ್ ಮೀಟಿಂಗ್ ಗಳಲ್ಲಿ ಭಾಗವಹಿಸಿ ಸಂವಾದ ನಡೆಸಿರುತ್ತಾರೆ.
ಅ.4 ರಂದು ರೋಂ ನಲ್ಲಿ ನಡೆಯುವ ಈ ಶೃಂಗ ಸಭೆಗೆ ಬರುವ ಆಹ್ವಾನಿತರು ಕೊರೊನಾ ಕಾರಣದಿಂದ ಕಡ್ಡಾಯವಾಗಿ 10 ದಿನಗಳ ಕಾಲ ಮುಂಚಿತ ವಾಗಿ ಕ್ವಾರೆಂಟೀನ್ ಆಗಬೇಕೆಂಬ ಬಿಗಿಯಾದ ನಿಯಮ ಇಟಲಿಯಲ್ಲಿದೆ. ಆದಕಾರಣ ಪೂಜ್ಯ ಗುರುಗಳು ಕಾರ್ಯಗೌರವದ ನಿಮಿತ್ತ ಅಷ್ಟು ದಿನಗಳ ಕಾಲ ಮುಂಚಿತ ವಾಗಿ ಬಂದು ವೈಯಕ್ತಿಕವಾಗಿ ಭಾಗವಹಿಸಲು ಸಾಧ್ಯವಾಗದೇ ಇರುವುದಕ್ಕೆ ಸಂಯೋಜಕರಿಗೆ ವಿಷಾದ ವಕ್ತಪಡಿಸಿ ತಮ್ಮ ವಿದೇಶ ಪ್ರವಾಸವನ್ನು ರದ್ದುಪಡಿಸಿ ರುತ್ತಾರೆ.
ಶೃಂಗ ಸಭೆಯ ಸಂಯೋಜಕರ ಕೋರಿಕೆ ಮೇರೆಗೆ ತಮ್ಮ ವಿಚಾರಗಳನ್ನು ಸಂಕ್ಷಿಪ್ತವಾಗಿ ವೀಡಿಯೋದಲ್ಲಿ ದಾಖಲಿಸಿ ಕಳುಹಿಸಿಕೊಟ್ಟಿರುತ್ತಾರೆ. ಅದನ್ನು ಜಗತ್ತಿನ ಅನೇಕ ಭಾಷೆಗಳಲ್ಲಿ ಭಾಷಾಂತರಿಸಿ ಪ್ರಸಾರ ಮಾಡುವುದಾಗಿ ಸಂಯೋಜಕರು ಪೂಜ್ಯಶ್ರೀಗಳವರಿಗೆ ಮಿಂಚೋಲೆ ಬರೆದಿರುತ್ತಾರೆ.